ರಾಮಮಂದಿರ ನಿರ್ಮಾಣಕ್ಕಾಗಿ ಜನಜಾಗೃತಿ ಮೂಡಿಸಿದ ಅಯೋಧ್ಯಾ ರಥ ಯಾತ್ರೆ
ಅಯೋಧ್ಯೆ, ಅಗಸ್ಟ್ 5: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಜನಜಾಗೃತಿ ಮೂಡಿಸಲು ಭಾರತೀಯ ಜನತಾ ಪಕ್ಷ ಮತ್ತು ವಿಶ್ವ ಹಿಂದೂ ಪರಿಷತ್ 1990 ಸೆಪ್ಟೆಂಬರ್ ನಲ್ಲಿ ರಥಯಾತ್ರೆ ಆಯೋಜನೆ ಮಾಡಿತ್ತು. ಬೃಹತ್ ರಥಯಾತ್ರೆಯ ನೇತೃತ್ವ ವಹಿಸಿದವರು ರಾಮ ಜನ್ಮಭೂಮಿ ಚಳವಳಿಯ ವಾಸ್ತುಶಿಲ್ಪಿಗಳೆಂದು ಪರಿಗಣಿಸಲ್ಪಟ್ಟಿರುವ ಲಾಲ್ ಕೃಷ್ಣ ಆಡ್ವಾಣಿ.
ಸೆಪ್ಟೆಂಬರ್ 25, 1990ರಂದು ಗುಜರಾತಿನ ಸೋಮನಾಥ ದೇಗುಲದಿಂದ ಹೊರಟ ಈ ರಥಯಾತ್ರೆ ಲಕ್ಷಾಂತರ ಹಿಂದೂ ಕಾರ್ಯಕರ್ತರ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನಡೆಯಿತು. ಪ್ರತೀ ದಿನ 300 ಕಿಲೋ ಮೀಟರ್ ಚಲಿಸುತ್ತಿದ್ದ ಈ ಯಾತ್ರೆಯಲ್ಲಿ ದಿನಕ್ಕೆ 6 ಜಾಥಗಳಲ್ಲಿ ಲಾಲ್ ಕೃಷ್ಣ ಅಡ್ವಾಣಿ ಭಾಷಣ ಮಾಡುತ್ತಿದ್ದರು. ಜೈ ಶ್ರೀ ರಾಮ್ ಎಂಬ ಉದ್ಘೋಷ ಎಲ್ಲೆಡೆಯಿಂದಲೂ ಕೇಳಿ ಬರುತ್ತಿತ್ತು. ಬಿಹಾರದಲ್ಲಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಈ ಜಾಥವನ್ನು ತಡೆಯಲು ಪ್ರಯತ್ನ ಮಾಡಿದರು ಮತ್ತು ಅಡ್ವಾಣಿ ಅವರನ್ನು ಬಂಧಿಸಿದರು.ಆಗ ಜನ ಆಕ್ರೋಶ ಮುಗಿಲು ಮುಟ್ಟಿದಾಗ ವಿಧಿಯಿಲ್ಲದೆ ಅವರನ್ನು ಬಿಡುಗಡೆ ಮಾಡಲೇ ಬೇಕಾಯಿತು.
ಬಳಿಕ ಉತ್ತರ ಪ್ರದೇಶ ಸರ್ಕಾರ ಮತ್ತೊಮ್ಮೆ ಜಾಥಕ್ಕೆ ಅಡ್ಡಗಾಲು ಹಾಕಿತು ಮತ್ತು 1,00,000 ಕರಸೇವಕರನ್ನು ಬಂಧಿಸಿತು. ವ್ಯಾಪಕ ಹಿಂಸಾಚಾರ ನಡೆದು ರಕ್ತಪಾತ ನಡೆದೇ ಹೋಯಿತು. ಎಲ್ಲ ಪ್ರತಿರೋಧಗಳ ನಡುವೆಯೂ ರಥಯಾತ್ರೆ 1990 ಅಕ್ಟೋಬರ್ 30ರಂದು ಅಯೋಧ್ಯೆಯನ್ನು ತಲುಪಿತು. ದೇಶದಲ್ಲೇ ಅತ್ಯಂತ ಜನಾಕರ್ಷಣೆ ಪಡೆದ ಮತ್ತು ವಿವಾದಗಳಿಗೆ ಕಾರಣವಾದ ರಥಯಾತ್ರೆ ಎಂದು ಇತಿಹಾಸದ ಪುಟದಲ್ಲಿ ಬರೆಯಲ್ಪಟ್ಟಿತು. ಅದೆಲ್ಲದರ ಪ್ರತಿಫಲವಾಗಿ ಭಾರತೀಯ ಜನತಾ ಪಕ್ಷಕ್ಕೆ ಮುಂದಿನ ಚುನಾವಣೆ ಅಧಿಕಾರವನ್ನು ದೊರಕಿಸಿ ಕೊಟ್ಟಿತು. ಆದರೆ ಭಾರತೀಯ ಜನತಾ ಪಕ್ಷದ ರಾಜಕೀಯ ಭೀಷ್ಮ ಎಂದೇ ಹೆಸರಾಗಿರುವ ಅಡ್ವಾಣಿ ಮಾತ್ರ ಮುಳ್ಳಿನ ಕಿರೀಟವನ್ನು ಧರಿಸಬೇಕಾಯಿತು.