BAN v IND 2nd Test : 227 ರನ್ ಗಳಿಗೆ ಬಾಂಗ್ಲಾ ಆಲೌಟ್..!!
ಉಮೇಶ್ ಯಾದವ್(4/25) ಹಾಗೂ ರವಿಚಂದ್ರನ್ ಅಶ್ವಿನ್(4/71) ಅವರ ಉತ್ತಮ ಬೌಲಿಂಗ್ ನೆರವಿನಿಂದ ಅತಿಥೇಯ ಬಾಂಗ್ಲಾದೇಶ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಮೂಲಕ 2ನೇ ಟೆಸ್ಟ್ನಲ್ಲಿ ಮೇಲುಗೈ ಸಾಧಿಸಿದೆ.
ಢಾಕಾದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮೊದಲ ಕ್ರಮಾಂಕದ ಬ್ಯಾಟರ್ ಮೊಮಿನುಲ್ ಹಕ್(84) ರನ್ಗಳ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 227 ರನ್ಗಳಿಗೆ ಆಲೌಟ್ ಆಯಿತು. ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ, ಮೊದಲ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 19 ರನ್ಗಳಿಸಿದ್ದು, 208 ರನ್ಗಳ ಹಿನ್ನಡೆಯೊಂದಿಗೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ನಾಯಕ ಕೆಎಲ್ ರಾಹುಲ್(3*) ಹಾಗೂ ಶುಭ್ಮನ್ ಗಿಲ್(14*) ರನ್ಗಳಿಸಿ ಕಣದಲ್ಲಿದ್ದಾರೆ.
ಬಾಂಗ್ಲಾ ಬ್ಯಾಟಿಂಗ್ ವೈಫಲ್ಯ:
ಮೊದಲು ಫೀಲ್ಡಿಂಗ್ ಅವಕಾಶ ಪಡೆದ ಭಾರತ, ಇನ್ನಿಂಗ್ಸ್ ಆರಂಭದಿಂದ ಬಿಗು ಬೌಲಿಂಗ್ ದಾಳಿ ನಡೆಸಿತು. ಅತಿಥೇಯ ತಂಡದ ಆರಂಭಿಕರಾದ ಶ್ಯಾಂಟೋ(24) ಹಾಗೂ ಜಾ಼ಕಿರ್ ಹಸನ್(15) ಮೊದಲ ವಿಕೆಟ್ಗೆ 39 ರನ್ ಕಲೆಹಾಕಿದರು. ಇದಾದ ನಂತರದಲ್ಲಿ ಕಣಕ್ಕಿಳಿದ ನಾಯಕ ಶಕೀಬ್ ಅಲ್ ಹಸನ್(16), ಮುಶ್ಫಿಕರ್ ರಹೀಮ್(26), ಲಿಟನ್ ದಾಸ್(25) ಹಾಗೂ ಮೆಹಿದಿ ಹಸನ್(15) ಉತ್ತಮ ಆರಂಭ ಪಡೆದರು ತಂಡಕ್ಕೆ ಆಸರೆ ಆಗಲಿಲ್ಲ.
ಆಸರೆಯಾದ ಮೊಮಿನುಲ್:
ಒಂದೆಡೆ ವಿಕೆಟ್ ಬೀಳುತ್ತಿದ್ದರು ಮೊಮಿನುಲ್ ಹಕ್(84) ಜವಾಬ್ದಾರಿಯ ಆಟವಾಡಿದಿಂದ ತಂಡಕ್ಕೆ ಆಸರೆಯಾದರು. ಮೊದಲ ಕ್ರಮಾಂಕದಲ್ಲಿ ಬಂದ ಮೊಮಿನುಲ್, ಭಾರತದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸುವ ಮೂಲಕ ತಂಡದ ಮೊತ್ತವನ್ನ 200ರ ಗಡಿದಾಟಿಸಿದರು. ಆದರೆ ವೈಯಕ್ತಿಕ 84 ರನ್ (154 ಬಾಲ್, 12 ಬೌಂಡರಿ, 1 ಸಿಕ್ಸ್) ಗಳಿಸಿ ಆಡುತ್ತಿದ್ದ ಮೊಮಿನುಲ್, ಆರ್. ಅಶ್ವಿನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಪರಿಣಾಮ ಬಾಂಗ್ಲಾ 227
ರನ್ಗಳಿಗೆ ಆಲೌಟ್ ಆಯಿತು.
ಉಮೇಶ್-ಅಶ್ವಿನ್ ಕಮಾಲ್:
ಭಾರತದ ಪರ ವೇಗಿ ಉಮೇಶ್ ಯಾದವ್(4/25) ಹಾಗೂ ರವಿಚಂದ್ರನ್ ಅಶ್ವಿನ್(4/71) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಈ ಇಬ್ಬರು ಬಾಂಗ್ಲಾ ತಂಡದ ಬ್ಯಾಟರ್ಗಳಿಗೆ ಉತ್ತಮ ರೀತಿಯಲ್ಲಿ ಕಡಿವಾಣ ಹಾಕಿದರು. ಉಳಿದಂತೆ ಹಲವು ವರ್ಷಗಳ ಬಳಿಕ ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯ ಆಡಿದ ಜಯದೇವ್ ಉನಾದ್ಕಟ್(2/50) ವಿಕೆಟ್ ಪಡೆದು ಮಿಂಚಿದರು.