ಶ್ರೀಲಂಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ ಏಂಜಿಲೋ ಮ್ಯಾಥೀವ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ʼಟೈಮ್ಡ್ ಔಟ್ʼ ಮೂಲಕ ಔಟಾಗಿ ಭಾರೀ ನಿರಾಸೆ ಅನುಭವಿಸಿದ್ದಾರೆ.
ದೆಹಲಿಯ ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯ ಈ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಶ್ರೀಲಂಕಾ, ತಮ್ಮ ಇನ್ನಿಂಗ್ಸ್‌ನ 24.2 ಓವರ್‌ನಲ್ಲಿ ಸದೀರ ಸಮರವಿಕ್ರಮ(41) ಅವರ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಲಂಕಾ ತಂಡದ ಅನುಭವಿ ಆಟಗಾರ ಏಂಜಿಲೋ ಮ್ಯಾಥೀವ್ಸ್ ಬ್ಯಾಟಿಂಗ್ ಮಾಡಲು ಕಣಕ್ಕಿಳಿದರು. ಆದರೆ ಶಕೀಬ್ ಅಲ್ ಹಸನ್ ಎಸೆದ ಈ ಓವರ್‌ನ 3ನೇ ಬಾಲ್ ಫೇಸ್ ಮಾಡಲು ಬಂದ ಏಂಜಿಲೋ ಮ್ಯಾಥೀವ್ಸ್, ಮೊದಲ ಬಾಲ್ ಎದುರಿಸಲು ಮುಂದಾದರು. ಆದರೆ ಈ ವೇಳೆ ತಮ್ಮ ಹೆಲ್ಮೆಟ್‌ನ ಬೆಲ್ಟ್ ಕಟ್ ಆಗಿದ್ದ ಕಾರಣ ಹೆಲ್ಮೆಟ್ ಬದಲಿಸಲು ಮುಂದಾದರು. ಆದರೆ ನಿಗದಿತ ಸಮಯಕ್ಕೆ ಸ್ಟ್ರೈಕ್ ತೆಗೆದುಕೊಳ್ಳದ ಕಾರಣ ಬಾಂಗ್ಲಾದೇಶದ ಆಟಗಾರರು ವಿಕೆಟ್‌ಗಾಗಿ ಮನವಿ ಮಾಡಿದರು.
ಈ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿದ ಉಭಯ ಅಂಪೈರ್‌ಗಳು ಕ್ರಿಕೆಟ್ ನಿಯಮದನ್ವಯ ಏಂಜಿಲೋ ಮ್ಯಾಥೀವ್ಸ್ ಅವರನ್ನ ಔಟ್ ಎಂದು ಘೋಷಣೆ ಮಾಡಿದರು. ಆದರೆ ಈ ಬಗ್ಗೆ ಅಂಪೈರ್ ಸೇರಿದಂತೆ ಬಾಂಗ್ಲಾ ಆಟಗಾರರೊಂದಿಗೆ ಏಂಜಿಲೋ ಮ್ಯಾಥೀವ್ಸ್ ಸಾಕಷ್ಟ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ʼಟೈಮ್ಡ್ ಔಟ್ʼ ಮೂಲಕ ತಮ್ಮ ವಿಕೆಟ್ ಕಳೆದುಕೊಂಡ ಮ್ಯಾಥೀವ್ಸ್, ಭಾರೀ ನಿರಾಸೆಯಿಂದಲೇ ಪೆವಿಲಿಯನ್‌ಗೆ ಹಿಂದಿರುಗಿದರು. ಮ್ಯಾಥೀವ್ಸ್ ʼಟೈಮ್ಡ್ ಔಟ್ʼ ಮೂಲಕ ಔಟಾಗಿ ಪೆವಿಲಿಯನ್ ಸೇರಿದ್ದು ಶ್ರೀಲಂಕಾ ಆಟಗಾರರು ಸೇರಿದಂತೆ ಪ್ರೇಕ್ಷಕರಿಗೂ ಅಚ್ಚರಿ ಮೂಡಿಸಿತು.
ಏನಿದು ʼಟೈಮ್ಡ್ ಔಟ್ʼ?
ಕ್ರಿಕೆಟ್‌ನಲ್ಲಿ ಐಸಿಸಿ ನಿಯಮದ ಪ್ರಕಾರ ಯಾವುದೇ ಬ್ಯಾಟರ್ ಔಟಾದ ಮೂರು ನಿಮಿಷದೊಳಗಾಗಿ ಬೇರೊಬ್ಬ ಬ್ಯಾಟರ್ ಸ್ಟ್ರೈಕ್ ತೆಗೆದುಕೊಂಡು ಮೊದಲ ಬಾಲ್ ಎದುರಿಸಬೇಕು. ಅಲ್ಲದೇ 2023ರ ಏಕದಿನ ವಿಶ್ವಕಪ್‌ನ ನಿಯಮದ ಪ್ರಕಾರ ಯಾವುದೇ ಬ್ಯಾಟ್ಸ್‌ಮನ್ ಔಟಾದ ಬಳಿಕ ಮತ್ತೋರ್ವ ಬ್ಯಾಟ್ಸ್‌ಮನ್ 2 ನಿಮಿಷದೊಳಗಾಗಿ ಸ್ಟ್ರೈಕ್ ತೆಗೆದುಕೊಳ್ಳಬೇಕಿದೆ. ಆದರೆ ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ ಏಂಜಿಲೋ ಮ್ಯಾಥೀವ್ಸ್, 3 ನಿಮಿಷ ಕಳೆದರೂ ಸ್ಟ್ರೈಕ್ ತೆಗೆದುಕೊಳ್ಳದ ಪರಿಣಾಮ ತಮ್ಮ ವಿಕೆಟ್ ಕಳೆದುಕೊಳ್ಳಬೇಕಾಯಿತು.
BAN v SL, Sri Lanka, Bangladesh, Angelo Mathews ‘timed out’