BAN vs IND : 12 ವರ್ಷದ ಬಳಿಕ ಟೆಸ್ಟ್ ಪಂದ್ಯವನ್ನಾಡುತ್ತಿರುವ ಉನಾದ್ಕಟ್
ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿರುವ ಸೌರಾಷ್ಟ್ರ ತಂಡದ ಎಡಗೈ ವೇಗದ ಬೌಲರ್ ಜಯದೇವ್ ಉನಾದ್ಕಟ್ ಬರೋಬ್ಬರಿ 12 ವರ್ಷದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಅತಿಥೇಯ ಬಾಂಗ್ಲಾದೇಶ ಹಾಗೂ ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯ ಗುರುವಾರದಿಂದ ಆರಂಭಗೊಂಡಿದ್ದು, ಮೊದಲ ಟೆಸ್ಟ್‌ನಲ್ಲಿ ಭಾರತದ ಗೆಲುವಿನ ರೂವಾರಿಯಾಗಿದ್ದ ಕುಲ್ದೀಪ್ ಯಾದವ್ ಅವರ ಸ್ಥಾನಕ್ಕೆ ಜಯದೇವ್ ಉನಾದ್ಕಟ್ ಅವರನ್ನ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಬರೋಬ್ಬರಿ 12 ವರ್ಷದ ಬಳಿಕ ಉನಾದ್ಕಟ್ ಭಾರತ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ.
31 ವರ್ಷದ ಜಯದೇವ್ ಉನಾದ್ಕಟ್ ಈ ಹಿಂದೆ 2010ರಲ್ಲಿ ಸೆಂಚುರಿಯನ್‌ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧ ತಮ್ಮ ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದರು. ಆದರೆ ನಂತರದಲ್ಲಿ ಏಳು ODI ಮತ್ತು 10 T20I ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಾನ ಪಡೆಯಲು ಎಡಗೈ ವೇಗದ ಬೌಲರ್‌ಗೆ ಸಾಧ್ಯವಾಗಿರಲಿಲ್ಲ.
ಆದರೆ ಇದೀಗ ಟೀಂ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಉನಾದ್ಕಟ್ ಯಶಸ್ವಿಯಾಗಿದ್ದಾರೆ. ಅದರಲ್ಲೂ ಮೊದಲ ಟೆಸ್ಟ್‌ನಲ್ಲಿ ಆಲ್ರೌಂಡ್ ಪ್ರದರ್ಶನದಿಂದ ತಂಡದಕ್ಕೆ ಗೆಲುವಿನಲ್ಲಿ ಮಿಂಚಿದ್ದ ಕುಲ್ದೀಪ್ ಅವರ ಸ್ಥಾನಕ್ಕೆ ಉನಾದ್ಕಟ್ ಅವರನ್ನ ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ.
ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರು ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದ ಪರಿಣಾಮ ಜಯದೇವ್ ಉನಾದ್ಕಟ್ ಅವರನ್ನ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ವೀಸಾ ಸಮಸ್ಯೆಯಿಂದಾಗಿ ನಿಗದಿತ ಸಮಯಕ್ಕೆ ಬಾಂಗ್ಲಾದೇಶಕ್ಕೆ ತೆರಳಲು ಆಗದ ಕಾರಣದಿಂದ ಮೊದಲ ಟೆಸ್ಟ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು.