Bangalore | ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬಾರದ ಸಿಬ್ಬಂದಿ : ಅಧಿಕಾರಿಗಳಿಗೆ ಸಚಿವರ ಎಚ್ಚರಿಕೆ
ಬೆಂಗಳೂರು : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಮೃತ್ ನಗರೋತ್ಥಾನ ಕಾಮಗಾರಿಗಳಿಗೆ ಸಚಿವ ವಿ.ಸೋಮಣ್ಣ ರವರು ಪೂಜಾ ಕಾರ್ಯಕ್ರಮವನ್ನು ನರವೇರಿಸಿ ಸ್ಥಳ ಪರಿವೀಕ್ಷಣೆ ನಡೆಸಿದರು.
ತಿಮ್ಮೇನಹಳ್ಳಿ ವೃತ್ತದಲ್ಲಿ ಸಿಮೆಂಟ್ ಮತ್ತು ಚರಂಡಿ ಅಭಿವೃದ್ಧಿ, ಪ್ರಶಾಂತನಗರದ 1ನೇ ಮುಖ್ಯರಸ್ತೆಯಲ್ಲಿ ಡಾಂಬರೀಕರಣ ಮತ್ತು ಚರಂಡಿ ಅಭಿವೃದ್ಧಿಗೆ ಚಾಲನೆ ನೀಡಿದರು. ಈ ವೇಳೆ ರೆಫರಲ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಸರಿಯಾದ ಸಮಯಕ್ಕೆ ವೈದ್ಯಕೀಯ ಸಿಬ್ಬಂದಿ ಬಾರದ್ದನ್ನು ಕಂಡು ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬಡವರಿಗಾಗಿ ನಿರ್ಮಾಣ ಮಾಡಿರುವ ಆಸ್ಪತ್ರೆಯಲ್ಲಿ ಇಂತಹ ನಿರ್ಲಕ್ಷ್ಯ ಸರಿಯಲ್ಲ, ರೋಗಿಗಳು ಚಿಕಿತ್ಸೆಗೆಂದು ಬಂದಾಗ ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಯಲ್ಲಿ ಇರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳೀಯರು ಹಾಗೂ ರೋಗಿಗಳ ಸಂಬಂಧಿಕರ ಸಮಸ್ಯೆಯನ್ನು ಆಲಿಸಿದ ಸಚಿವರು ಕೂಡಲೇ ಆಸ್ಪತ್ರೆಯಲ್ಲಿ ಬಿಸಿನೀರಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ತಾಕೀತು ಮಾಡಿದರು.
ತದನಂತರ ತಿಮ್ಮೇನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಕಟ್ಟಡಕ್ಕೆ ಸಚಿವರು ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಗೌಡ, ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ, ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಮುಖಂಡರು, ನಿವಾಸಿಗಳು ಹಾಜರಿದ್ದರು.