Bangalore | ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಜಾರಿ ಮಾಡದಿದ್ದರೇ ರಾಜ್ಯಾದ್ಯಂತ ಜನಾಂದೋಲನ
ಬೆಂಗಳೂರು : ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರ ಶೇ. 10ರಷ್ಟುಮೀಸಲಾತಿ ಘೋಷಣೆ ಮಾಡಿದ್ದು, ಈಗ ಹಲವು ರಾಜ್ಯಗಳಲ್ಲಿ ಕಾರ್ಯರೂಪಕ್ಕೂ ಬರುತ್ತಿದೆ. ಆದ್ರೆ ನಮ್ಮ ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಮೀನಾಮೇಷ ಎನಿಸುತ್ತಿದೆ. ಒಂದು ವೇಳೆ ಈ ಕಾಯ್ದೆಯನ್ನು ಜಾರಿಗೊಳಿಸದಿದ್ರೆ ರಾಜ್ಯಾದ್ಯಂತ ಜನಾಂದೋಲನ ಹೋರಾಟ ನಡೆಸುವುದಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಅವರು ಎಚ್ಚರಿಕೆ ನೀಡಿದ್ದಾರೆ.
2019ರ ಜನವರಿ ತಿಂಗಳಿನಲ್ಲಿ ಕೇಂದ್ರದ ಸಚಿವ ಸಂಪುಟಸಭೆಯಲ್ಲಿ ಅನುಮೋದನೆ ಪಡೆದುಕೊಂಡ ಈ ಮೀಸಲಾತಿ ಕಾಯ್ದೆಯನ್ನು ಜನವರಿ 8, 2019ರಲ್ಲಿ 124ನೇ ವಿದಿ ತಿದ್ದುಪಡಿಯನ್ವಯ ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲೂ ಅಂಗೀಕರಿಸಿ ಕಾಯ್ದೆ ಜಾರಿ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸರ್ಕಾರಿ ಉದ್ಯೋಗ ನೀಡುವಲ್ಲಿ ಹಾಗೂ ಪ್ರತಿಭಾನ್ವಿತ ಬಡವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದೆ ಬರಲು ಶೇ. 10ರಷ್ಟು ಮೀಸಲಾತಿ ನೀಡುವ ಕಾಯ್ದೆ ಇದಾಗಿದೆ ಎಂದು ಅವರು ಹೇಳಿದರು.
ಯೂಥ್ ಫರ್ ಈಕ್ವಾಲಿಟಿ ಎಂಬ ಎನ್ ಜಿ ಒ ಸಂಸ್ಥೆಯು ಜನವರಿ 10ರಂದು ಜಾತಿ ಆಧಾರಿತ ಮೀಸಲಾತಿ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳ ಮೀಸಲಾತಿಯನ್ನು ಶೇ. 50ರ ಮೀಸಲಾತಿ ಅಡಿಯಲ್ಲಿ ಸೇರಿಸಲು ಮನವಿ ಮಾಡಿಕೊಂಡಿತ್ತು. ಈ ಮೀಸಲಾತಿಯು ಶೇ.50 ಮೀಸಲಾತಿಯನ್ನು ಹೊರತುಪಡಿಸಿದ್ದಾಗಿತ್ತು. ಆದರೆ ಸುಪ್ರೀಂಕೋರ್ಟ್ ಈ ಮನವಿಯನ್ನು ತಿರಸ್ಕರಿಸಿ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. 2021ರ ಆಗಸ್ಟ್ 6ರಂದು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಜೊತೆಗೆ 5 ಸದಸ್ಯರ ವಿಸ್ಕೃತ ಪೀಠಕ್ಕೆ ಈ ಅರ್ಜಿಯನ್ನು ವರ್ಗಾಯಿಸಿತು ಎಂದು ಡಾ. ಶಂಕರ್ ಗುಹಾ ಅವರು ಮಾಹಿತಿ ನೀಡಿದರು.
ಈ ಮೀಸಲಾತಿಯನ್ನು ಜಾರಿಮಾಡಲು ಪ್ರತಿಯೊಂದು ರಾಜ್ಯವೂ ತನಗೆ ಬೇಕಾದಂತೆ ಅರ್ಹತಾ ಮಾನದಂಡಗಳನ್ನು ರಚಿಸಲು ಸ್ವತಂತ್ರ ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಸದ್ಯ ಈ ಮೀಸಲಾತಿಯನ್ನು ವಾರ್ಷಿಕ ಸಂಪಾದನೆ 8 ಲಕ್ಷಕ್ಕಿಂತ ಕಡಿಮೆ, 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರು, ಮನೆಯ ನಿವೇಶನ 1000 ಕ್ಕಿಂತ ಕಡಿಮೆ ಇರುವವರು, ಪಟ್ಟಣ ಪಂಚಾಯತ್ ವ್ಯಾಪ್ತಿಯಲಿ 100 ಚದರಡಿ ಒಳಗೆ ಹಾಗೂ ಮುನಿಸಿಪಾಲಿಟಿ ವ್ಯಾಪ್ತಿಯ ಹೊರಗಿರುವವರು 200 ಚದರಡಿಯ ಮನೆ ಹೊಂದಿರುವವರು ಹಾಗೂ ಇಡಬ್ಲ್ಯೂಎಸ್ ಸರ್ಟಿಫಿಕೇಟ್ ಕಡ್ಡಾಯವಾಗಿ ಹೊಂದಿರುವವರುಮೀಸಲಾತಿಗೆ ಅರ್ಜಿಸಲ್ಲಿಸಬಹುದು ಎನ್ನುವ ನಿಯಮ ಮಾಡಲಾಗಿದೆ ಎಂದರು.
ಈಗಾಗಲೇ 11 ರಾಜ್ಯಗಳು ಈ ಮೀಸಲಾತಿಯನ್ನುಜಾರಿಗೆ ತಂದಿವೆ. ಕೇರಳ, ಮಹಾರಾಷ, ಗುಜರಾತ್ ಉತ್ತರಾಖಂಡ್, ಜಾರ್ಖಂಡ್, ಮಿಜೋರಾಂ, ದೆಹಲಿ, ಅಸ್ಸಾಂ, ಜಮ್ಮು ಕಾಶ್ಮೀರ, ಗೋವಾ, ತೆಲಂಗಾಣ ಮತು ಆಂಧ್ರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಶೇ.10ರಷ್ಟು ಮೀಸಲಾತಿ ಯೋಜನೆ ಜಾರಿಯಲ್ಲಿದೆ. ನಮ್ಮ ರಾಜ್ಯದಲ್ಲಿ ಈ ಹಿಂದೆ ಬಿ.ಎಸ್ ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ, ರಾಜೀನಾಮೆ ನೀಡುವ ಒಂದು ದಿನ ಮೊದಲು ಸಚಿವ ಸಂಪುಟದಲ್ಲಿ ಈ ವಿಚಾರ ಚರ್ಚೆಗೆ ತಂದಿದ್ದರು ಎಂದು ಡಾ. ಶಂಕರ್ ಗುಹಾ ಹೇಳಿದರು.
ನಂತರ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಮೀಸಲಾತಿ ಅನುಷ್ಠಾನಕ್ಕೆ ಮನಸು ಮಾಡುತ್ತಿಲ್ಲ. ಈ ಮೀಸಲಾತಿ ಜಾರಿಯಾದರೇ, ಬಡಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾನ್ವೇಷಣೆಯಲ್ಲಿ ನಿರತ ಬಡ ಯುವಕ/ಯುವತಿಯರಿಗೆ ಸಹಾಯವಾಗುತ್ತದೆ. ಸರ್ಕಾರ ಇದನ್ನು ಕೂಡಲೆ ಜಾರಿಗೆ ತರಬೇಕು, ಆರ್ಥಿಕವಾಗಿ ಹಿಂದುಳಿದ ಸಮುದಾಯದ ನಿರ್ಲಕ್ಷ್ಯ ತೀವ್ರ ಖಂಡನಾರ್ಹವಾಗಿದೆ ಎಂದರು.
ಹೀಗಾಗಿ ಹಾಲಿ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಗಡವು ನೀಡುತ್ತಿದ್ದೇವೆ. ಈ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಲು ಇಡಬ್ಲ್ಯುಎಸ್ ಮೀಸಲಾತಿ ಹೋರಾಟ ಸಮಿತಿ ರಚಿಸಿದ್ದೇವೆ. ರಾಜ್ಯ ಸರ್ಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದಲಿ ರಾಜ್ಯಾದ್ಯಂತ ಜನಜಾಗೃತಿ ಮೂಡಿಸಲು ಯೋಜನೆ ರೂಪಿಸಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಬೀದಿಗಿಳಿದುಹೋರಾಟನಡೆಸಲು ಸಿದ್ಧರಿದ್ದೇವೆ. ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆಯೇ ವಿನಃ ದೈಹಿಕ ಹೋರಾಟದಲ್ಲಿ ಹಿಂದೆ ಬೀಳುವುದಿಲ್ಲ. ಈಗಲಾದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೇ ಇದ್ದರೇ ಉಗ್ರ ಹೋರಾಟ ನಡೆಸುವುದಾಗಿ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಹೋರಾಟ ಸಮಿತಿಯ ಮುಖ್ಯ ಸಲಹೆಗಾರ ಪ್ರೊ.. ಕೆ.ಇ. ರಾಧಾಕೃಷ್ಣ, ಕಾರ್ಯದರ್ಶಿ ಎಚ್.ಎ. ಶ್ರೀನಿವಾಸ್, ಸದಸ್ಯರುಗಳಾದ ಡಾ. ಆಡೂರು ಗುರುಚರಣ್ ಮತ್ತು ಬಿ.ಎಸ್. ದತ್ತಾತ್ರೇಯ ಅವರು ಉಪಸ್ಥಿತರಿದ್ದರು.