Bangalore: ಐತಿಹಾಸಿಕ ಬೆಂಗಳೂರು ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಶುರು
ಐತಿಹಾಸಿಕ ಬೆಂಗಳೂರು ಕಡಲೆಕಾಯಿ ಪರಿಷೆಗೆ (Groundnut) ಕ್ಷಣಗಣನೆ ಆರಂಭವಾಗಿದೆ. ಬರೋಬ್ಬರಿ ಐದು ದಶಕಗಳ ಕಾಲದ ಇತಿಹಾಸ ಹೊಂದಿರುವ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಇಂದು ಸಂಜೆ ತುಲಾಭಾರ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಿದ್ದಾರೆ.
ಸತತ ಐದು ದಿನಗಳ ಕಾಲ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದ್ದು, ಇಂದು ಸಂಜೆ 6 ಗಂಟೆ ಸುಮಾರಿಗೆ ಪರಿಷೆಯ ಸಂಭ್ರಮ ಆರಂಭವಾಗಲಿದೆ.
ಸುಮಾರು 2 ಸಾವಿರ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲು ಮತ್ತು ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದ್ದು, ಮುನ್ನೆಚರಿಕೆ ಸಲುವಾಗಿ ಅಗ್ನಿಶಾಮಕ ವಾಹನ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಮಾರು 500 ರಿಂದ 600 ಪೋಲೀಸ್ ಸಿಬ್ಬಂದಿಗಳನ್ನು ಇಲಾಖೆ ವತಿಯಿಂದ ನಿಯೋಜಿಸಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರು ಮಾಹಿತಿ ನೀಡಿದ್ದಾರೆ.
ಈ ಬಾರಿ ಪ್ಲಾಸ್ಟಿಕ್ ಮುಕ್ತ ಪರಿಷೆಗೆ ಬಿಬಿಎಂಪಿ ನಿರ್ಧರಿಸಿದ್ದು, ಪ್ರತಿ ಅಂಗಡಿಗೂ ಪಾಲಿಕೆಯಿಂದ ಪರಿಸರ ಸ್ನೇಹಿ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲ ಸಾರ್ವಜನಿಕರಲ್ಲಿ ತಾವೇ ಕೈಚೀಲಗಳನ್ನು ತರುವಂತೆ ಬಿಬಿಎಂಪಿ ಮನವಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಕಡಲೆಕಾಯಿ ಪರಿಷೆ ನಡೆದಿರಲಿಲ್ಲ.
bangalore-the-countdown-to-the-historic-bengaluru-groundnut-parishad-has-begun