ನವದೆಹಲಿ: ಬಾಂಗ್ಲಾದೇಶದಲ್ಲಿ (Bangladesh Unrest) ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಅಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಶೇಖ್ ಹಸೀನಾ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೀವ ರಕ್ಷಣೆಗಾಗಿ ದೇಶ ತೊರೆದರೂ ಅಲ್ಲಿ ಹಿಂಸಾಚಾರ ನಿಲ್ಲುತ್ತಿಲ್ಲು. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು ಸರ್ವಪಕ್ಷಗಳ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಸ್ಥಾಪಿತ ಸರ್ಕಾರವನ್ನು ಉರುಳಿಸುವ ಹಿಂದೆ ವಿದೇಶಿ ಕೈವಾಡ ಇದ್ಯಾ? ಎಂದು ಪಾಕ್ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ವಿದೇಶಾಂಗ ಸಚಿವರು, ವಿದೇಶಿ ಪಿತೂರಿಯ ಕುರಿತು ಏನೂ ಹೇಳಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಆರೋಪವನ್ನು ತಳ್ಳಿ ಹಾಕಲು ಆಗುವುದಿಲ್ಲ. ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾದೇಶದ ಆಂದೋಲನ ಬೆಂಬಲಿಸುವ ಪ್ರೊಫೈಲ್ ಚಿತ್ರ ಹಾಕಿರುವುದು ಹಲವಾರು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಕುರಿತು ತನಿಖೆ ನಡೆದಿದೆ ಎಂದು ಹೇಳಿದ್ದಾರೆ.
ಢಾಕಾದಲ್ಲಿನ ಅಧಿಕಾರ ಬದಲಾವಣೆಯ ರಾಜತಾಂತ್ರಿಕ ಪರಿಣಾಮಗಳನ್ನು ಎದುರಿಸಲು ಸರ್ಕಾರದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕಾರ್ಯತಂತ್ರ ಏನು ಎಂಬ ಪ್ರಶ್ನೆಗೆ ಈಗ ಅಲ್ಲಿ ಹಲವು ವಿದ್ಯಮಾನಗಳು ನಡೆಯುತ್ತಿದೆ. ಕೇಂದ್ರವು ತನ್ನ ಮುಂದಿನ ನಡೆಯನ್ನು ಉತ್ತಮಗೊಳಿಸಲು ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಿದೆ ಎಂದು ಜೈ ಶಂಕರ್ ಹೇಳಿದ್ದಾರೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ (Sheikh Hasina) ಭಾರತಕ್ಕೆ ಹೇಗೆ ಆಗಮಿಸಿದರು? ಈಗ ಶೇಕ್ ಹಸೀನಾ ಅವರನ್ನು ಭಾರತ ಹೇಗೆ ನೋಡಿಕೊಳ್ಳುತ್ತಿದೆ ಎಂಬ ಪ್ರಶ್ನೆಗೂ ಜೈಶಂಕರ್ ಉತ್ತರ ನೀಡಿದ್ದಾರೆ. ಶೇಕ್ ಹಸೀನಾ ಅವರು ಸದ್ಯ ನಮ್ಮ ದೇಶದಲ್ಲಿದ್ದಾರೆ. ಅವರ ಮುಂದಿನ ನಿರ್ಧಾರ ಏನು ಎಂದು ತಿಳಿಸಲು ಭಾರತ ಸರ್ಕಾರ ಅವರಿಗೆ ಸಮಯ ನೀಡಲು ಬಯಸಿದೆ ಎಂದು ಕೂಡ ಹೇಳಿದ್ದಾರೆ.