ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮತ್ತೊಂದು ಮಹತ್ವದ ದಾಖಲೆಯನ್ನು ಸರಿಗಟ್ಟಿದ್ದು, ನಾಳೆಯಿಂದ ಅದನ್ನು ಹಿಂದಿಕ್ಕಲಿದ್ದಾರೆ.
ಚುನಾವಣೆಯಲ್ಲಿ ಜನರಿಂದ ಆಯ್ಕೆಯಾಗಿ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅವಧಿಯ ದಾಖಲೆಯಲ್ಲಿ ಮೋದಿ ಹಾಗೂ ನೆಹರೂ ಇದೀಗ ಸಮಬಲ ಸಾಧಿಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೋದಿ, ಜೂನ್ 9ರ ವೇಳೆಗೆ ಸತತ 4,398 ದಿನಗಳ ಕಾಲ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿ ನೆಹರು ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಜೂನ್ 10ರಂದು ಮೋದಿ ಈ ಮೈಲಿಗಲ್ಲನ್ನು ಮೀರಲಿದ್ದು, ಭಾರತದ ಇತಿಹಾಸದಲ್ಲಿ ಚುನಾಯಿತ ಪ್ರಧಾನಿಯಾಗಿ ಅತ್ಯಂತ ದೀರ್ಘಕಾಲ ನಿರಂತರ ಸೇವೆ ಸಲ್ಲಿಸಿದ ನಾಯಕರಲ್ಲಿ ಹೊಸ ದಾಖಲೆಯನ್ನು ನಿರ್ಮಿಸಲಿದ್ದಾರೆ.
2014, 2019 ಹಾಗೂ 2024ರ ಲೋಕಸಭಾ ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿರುವ ಮೋದಿ, ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಈ ಸಾಧನೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯವಾಗಿ ದಾಖಲಾಗಲಿದೆ.








