ದೇಶದ್ರೋಹಿಗಳಿಗೆ ಶಾಕ್ – ಮಲ್ಯ , ಚೋಕ್ಸಿ ಮೋದಿಯ 18,170 ಕೋಟಿ ರೂ. ಆಸ್ತಿ ಜಪ್ತಿ
ನವದೆಹಲಿ: ದೇಶದ ಬ್ಯಾಂಕುಗಳಿಂದ ಕೋಟ್ಯಾಂತರ ಸಾಲ ಮಾಡಿ ಇದೀಗ ದೇಶ ಬಿಟ್ಟು ಪರಾರಿಯಾಗಿ ದೇಶದ್ರೋಹಿಗಳೆಂಬ ಹಣೆಪಟ್ಟಿ ಹೊಂದಿರುವ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯ ಆಸ್ತಿಯನ್ನ ಜಪ್ತಿ ಮಾಡುವ ಮೂಲಕ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ.
ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 18,170 ಕೋಟಿ ರೂ. ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆ ಅಡಿ ಜಪ್ತಿ ಮಾಡಿದೆ.
ಈ ಮೂಲಕ ಮೂವರಿಂದ ಬ್ಯಾಂಕ್ಗಳಿಗೆ ಆಗಿರುವ ನಷ್ಟದ ಶೇ.80ರಷ್ಟು ಮೊತ್ತವನ್ನು ಜಪ್ತಿ ಮಾಡಲಾಗಿದೆ ಎನ್ನಲಾಗಿದೆ. ಇನ್ನೂ ಇದರಲ್ಲಿ 9,371 ಕೋಟಿ ರೂ.ಗಳನ್ನು ಬ್ಯಾಂಕ್ ಗಳಿಗೆ ಒಪ್ಪಿಸಲಾಗಿದೆ ಎಂದು ಇಡಿ ಟ್ವಿಟ್ಟರ್ ನಲ್ಲಿ ಖಚಿತ ಮಾಹಿತಿ ನೀಡಿದೆ.
ವಿಜಯ್ ಮಲ್ಯ ಹಾಗೂ ನೀರವ್ ಮೋದಿ, ಭಾರತದ ಬ್ಯಾಂಕ್ಗಳಲ್ಲಿ ಸಾಲ ಪಡೆದು ದೇಶ ಬಿಟ್ಟು ಪರಾರಿಯಾಗಿ ಇದೀಗ ಲಂಡನ್ನಲ್ಲಿ ನೆಲೆಸಿದ್ದಾರೆ. ಇಬ್ಬರನ್ನು ದೇಶಕ್ಕೆ ಕರೆತರಲು ಭಾರತ ಸರ್ಕಾರ ಇಂಗ್ಲೆಂಡ್ ಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸುತ್ತಿದೆ.
ಡೊಮಿನಿಕಾದಲ್ಲಿ ಸಿಕ್ಕಿ ಬಿದ್ದಿರುವ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ. ಡೊಮಿನಿಕಾ ಸರ್ಕಾರ ಚೋಕ್ಸಿಯನ್ನು ನಿಷೇಧಿತ ವಲಸಿಗ ಎಂದು ಘೋಷಿಸಿದೆ.








