ಬಾರ್ಬೊರ ಕ್ರೇಝಿಕೊವಾ ಮುಡಿಗೆ 2021ರ ಫ್ರೆಂಚ್ ಓಪನ್ ಗರಿ..!
ಈ ಕ್ಷಣಗಳನ್ನು ಹೇಳಿಕೊಳ್ಳಲು ನನ್ನಲ್ಲಿ ಪದಗಳಿಲ್ಲ. ನನಗೆ ನಿಜಕ್ಕೂ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿದ್ದೇನೆ ಅನ್ನೋದನ್ನು ಸಹ ನಂಬುವುದಕ್ಕೆ ಆಗುತ್ತಿಲ್ಲ. ನನ್ನ ಖುಷಿಗೆ ಪಾರವೇ ಇಲ್ಲ. ನಾನು ಆ ಖುಷಿಯನ್ನು ಆನಂದಿಸುತ್ತಿದ್ದೇನೆ… ಹೀಗೆ ರೋಲ್ಯಾಂಡ್ ಗ್ಯಾರೋಸ್ ಅಂಗಣದಲ್ಲಿ ಬಾರ್ಬೊರ ಕ್ರೆಝೋಕೊವಾ ಅವರು ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಎದೆಗಪ್ಪಿಕೊಂಡು ಹೇಳಿದ ಮಾತುಗಳು.
ಫೈನಲ್ ಪಂದ್ಯದಲ್ಲಿ ಚೆಕ್ ಗಣರಾಜ್ಯದ ಬಾರ್ಬೊರ ಕ್ರೆಝೊಕೊವಾ ಅವರು 6-1, 2-6, 6-4ರಿಂದ ರಷ್ಯಾದ ಅನಾಸ್ಟೆಸಿಯಾ ಪಾವ್ಲುಚುಕೊವಾ ಅವರನ್ನು ಸೋಲಿಸಿ ಚೊಚ್ಚಲ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇಲ್ಲಿಯವರೆಗೆ ಡಬಲ್ಸ್ ನಲ್ಲಿ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದುಕೊಂಡಿದ್ದ ಬಾರ್ಬೊರಾ ಅವರು ಇದೀಗ ಸಿಂಗಲ್ಸ್ ನಲ್ಲೂ ಪಾರುಪತ್ಯ ಸ್ಥಾಪಿಸಿದ್ದಾರೆ. 2018ರ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಟೂರ್ನಿಯ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದ, ಬಾರ್ಬೊರ ಅವರು, 2021ರ ಆಸ್ಟ್ರೇಲಿಯನ್ ಓಪನ್‍ನಲ್ಲಿ ರನ್ನರ್ ಅಪ್ ಪ್ರಶಸ್ತಿ ಹಾಗೂ 2018ರ ಯುಎಸ್ ಓಪನ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.
ಇನ್ನು ಮಿಕ್ಸೆಡ್ ಡಬಲ್ಸ್ ನಲ್ಲೂ 2019, 2020 ಮತ್ತು 2021ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ಈ ಗೆಲುವಿನೊಂದಿಗೆ ಬಾರ್ಬೊರ ಅವರು ಇನ್ನೊಂದು ಸಾಧನೆ ಮಾಡಿದ್ದಾರೆ. 40 ವರ್ಷಗಳ ಬಳಿಕ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಮಹಿಳಾ ಆಟಗಾರ್ತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. 1981ರಲ್ಲಿ ಚೆಕ್ ಗಣರಾಜ್ಯದ ಹಾನಾ ಮಾಂಡ್ಲಿಕೋವಾ ಅವರು ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಇದೀಗ ಹಾನಾ ಮಾಂಡ್ಲಿಕೊವಾ ಸಾಲಿಗೆ ಬಾರ್ಬೊರ ಕ್ರೇಝಿಕೋವಾ ಕೂಡ ಸೇರಿಕೊಂಡಿದ್ದಾರೆ.
ಅದೇ ರೀತಿ ಬಾರ್ಬೊರ ಅವರು ಡಬಲ್ಸ್ ನಲ್ಲೂ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಬಾರ್ಬೊರ ಮತ್ತು ಸಿನಿಕೊವಾ ಅವರು, ಸ್ವಿಟೆಕ್ ಮತ್ತು ಮಾಟೆಕ್ ಅವರನ್ನು ಎದುರಿಸಲಿದ್ದಾರೆ.
ಅಂದ ಹಾಗೇ ಬಾರ್ಬೊರ ಅವರು ಈ ಚೊಚ್ಚಲ ಪ್ರಶಸ್ತಿಯನ್ನು ಕೋಚ್ ಜಾನಾ ನೊವೋಟ್ನಾ ಅವರಿಗೆ ಅರ್ಪಣೆ ಮಾಡಿದ್ದಾರೆ. ಜಾನಾ ನೊವೋಟ್ಮಾ ಅವರು 1998ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದರು. ನೊವೋಟ್ನಾ ಅವರು 2017ರಲ್ಲಿ ನಿಧನರಾಗಿದ್ದಾರೆ.
ನಾನು ನನ್ನ ಕೋಚ್ ಜಾನಾ ನೊವೊಟ್ನೊ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ನನ್ನ ಕೋಚ್ ಸ್ಪೂರ್ತಿಯಾಗಿದ್ದರು. ಒಂದು ವೇಳೆ ಅವರು ಇರುತ್ತಿದ್ರೆ ಇನ್ನಷ್ಟು ಖುಷಿಪಡುತ್ತಿದ್ದರು ಅಂತಾರೆ ಬಾರ್ಬೊರ ಕ್ರೆಝಿಕೊವಾ.
ಒಟ್ಟಿನಲ್ಲಿ ಬಾರ್ಬೊರ ಕ್ರೆಝೊಕೊವಾ ಅವರು ಶ್ರೇಯಾಂಕ ರಹಿತರಾಗಿ ಟೂರ್ನಿಯಲ್ಲಿ ಸ್ಪರ್ಧಿಸಿ ಅದ್ಭುತ ಆಟವನ್ನಾಡಿದ್ರು. ಅಲ್ಲದೆ ಅರ್ಹವಾಗಿಯೇ ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದರು.