“ನನ್ನ ಆಕ್ರಂದನ ಕೇಳುತ್ತಿಲ್ಲವೇ…?” ನೋವಿನಿಂದ ಅಲವತ್ತುಕೊಳ್ಳುತ್ತಿದೆ ಚಿಕ್ಕಮಗಳೂರಿನ ಬಸವನಹಳ್ಳಿ/ದಂಟರಮಕ್ಕಿ ಕೆರೆ:
ಹೀಗೆಂದು ನಮ್ಮ ಚಿಕ್ಕಮಗಳೂರಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ಬಸವನಹಳ್ಳಿ (ದಂಟರಮಕ್ಕಿ) ಕೆರೆ ಮೌನವಾಗಿ ರೋಧಿಸುತ್ತಿದೆ. ಆದರೆ ಚಿಕ್ಕಮಗಳೂರಿನ ಹಾಗೂ ಈ ಕೆರೆ ಪಾತ್ರದ ಜನರು ಜಾಣ ಕುರುಡು, ಜಾಣ ಮೌನ ಪ್ರದರ್ಶಿಸುತ್ತಿದ್ದಾರೆ. ಕೆರೆಯ ಅವ್ಯವಸ್ಥೆಯ ಬಗ್ಗೆ ಮಾತನಾಡುವ ಮೊದಲು ಕೆರೆ ರೂಪುಗೊಂಡ ಕುರಿತು ಒಂದಷ್ಟು ದೃಷ್ಟಿ ಹಾಯಿಸೋಣ.
ಚಿಕ್ಕಮಗಳೂರು ನಗರವನ್ನು ಒಂದು ಪಾರ್ಶ್ವಕ್ಕೆ ಆವರಿಸಿಕೊಂಡಿರುವ ಚಂದ್ರದ್ರೋಣ ಗಿರಿಶ್ರೇಣಿಯಿಂದ ತಳಭಾಗಕ್ಕೆ ಹರಿಯುವ ಮಳೆ ನೀರು ಹಾಗೂ ತೊರೆಗಳ ನೀರನ್ನು ಹಿಡಿದಿಟ್ಟು ಚಿಕ್ಕಮಗಳೂರಿಗೆ ಕುಡಿಯಲು ಹಾಗೂ ಸುತ್ತಲಿನ ಪ್ರದೇಶಗಳಿಗೆ ಕೃಷಿ ಅನುಕೂಲಕ್ಕಾಗಿ ದಶಕಗಳ ಹಿಂದೆ ರೂಪುಗೊಂಡಿದ್ದೇ ಈ ಅದ್ಭುತ ಜಲ ಸಂಗ್ರಹ ವ್ಯವಸ್ಥೆ. ಈ ಅತ್ಯುತ್ತಮ gravity water system ನ ಮೊದಲ ಕೆರೆಯನ್ನಾಗಿ ಹಿರೇಕೊಳಲೆ ಕೆರೆಯನ್ನು ನಿರ್ಮಿಸಲಾಯಿತು.
ಯಗಚಿ ಅಣೆಕಟ್ಟುನ ಹರಿಯುವ ನೀರನ್ನು ಸಂಗ್ರಹಿಸುವ ಸಲುವಾಗಿ ನಿರ್ಮಾಣವಾಗಿದ್ದು ರಾಮೇಶ್ವರ ಕೆರೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಮೃದ್ಧವಾಗಿ ತರಕಾರಿ ಬೆಳೆಯಲಾಗುತ್ತದೆ. ಈ ಕೆರೆಯು ತುಂಬಿದ ನಂತರ ಹರಿಯುವ ನೀರನ್ನು ಸಂಗ್ರಹಿಸಲು ನಿರ್ಮಿಸಿದ್ದೇ ಇಂದು ಮರಣಶಯ್ಯೆಯಲ್ಲಿರುವ ನಗರದ ಹೃದಯಭಾಗದಲ್ಲಿರುವ ಬಸವನಹಳ್ಳಿ ಕೆರೆ ಅಥವಾ ದಂಟರಮಕ್ಕಿ ಕೆರೆ. ಜಿಲ್ಲಾಡಳಿತದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಾಗೂ ದಿವ್ಯ ನಿರ್ಲಕ್ಷ್ಯದಿಂದಾಗಿ ನಗರದ ಕೊಳಚೆ ನೀರು ಕೆರೆಯನ್ನು ವ್ಯಾಪಿಸಿಕೊಂಡು ಅಕ್ಷರಷಃ ಕೆರೆಯನ್ನು ಕೊಂದುಹಾಕಿದೆ.
ಅಳಿವಿನಂಚಿನಲ್ಲಿರುವುದು ಕೇವಲ ಇದೊಂದೇ ಕೆರೆಯಲ್ಲ, ಈ ಕೆರೆಯೊಂದಿಗೆ ಜಲ ಸಂಪರ್ಕ ಹೊಂದಿರುವ ಹಿರೇಮಗಳೂರು ಕೆರೆ ಹಾಗೂ ಕೋಟೆ ಕೆರೆಗಳನ್ನೊಳಗೊಂಡಂತೆ ಈ ಕೆರೆಗಳ ಕೆಳಭಾಗದಲ್ಲಿರುವ ಎಲ್ಲಾ ಜಲಮೂಲಗಳೂ ಕಲುಷಿತಗೊಂಡಿವೆ. ಈ ವಿಚಾರ ‘ಕೆರೆನೀರು ಕಲುಷಿತಗೊಂಡಿದೆ ಸರಿ ಪಡಿಸಿ’ ಎಂದು ಹೇಳಿ ಸುಮ್ಮನಾಗುವಷ್ಟು ಚಿಕ್ಕ ಅಥವಾ ಹಗುರ ವಿಚಾರ ಅಲ್ಲವೇ ಅಲ್ಲ. ಭೂಮಿಯ ಮೇಲ್ಮೈ ಹೇಗೆ ಅಸಂಖ್ಯ ಜೀವಿಗಳ ಆವಾಸ ಸ್ಥಾನವೋ ಹಾಗೆಯೇ ನೀರಿನೊಳಗಿನದ್ದೂ ಕೂಡಾ ಅಷ್ಟೇ ದೊಡ್ಡ ಜಗತ್ತು. ಜಲಸಂಪತ್ತೆಂದರೆ ಕೇವಲ ನೀರಿನ ಮೂಲವಷ್ಟೇ ಅಲ್ಲ. ಅದು ಅಸಂಖ್ಯಾತ ಜಲಚರಗಳಿಗೆ ಆಮ್ಲಜನಕ. ಸೂಕ್ಷ್ಮತೆ ಕಳೆದುಕೊಂಡ ನಮ್ಮ ಆಡಳಿತ ವ್ಯವಸ್ಥೆ ಕೊಳಚೆ ನೀರನ್ನು ಕೆರೆಗೆ ಹರಿಯಲು ಪರೋಕ್ಷವಾಗಿ ಅವಕಾಶ ಕಲ್ಪಿಸಿ ಈ ಆಮ್ಲಜನಕವನ್ನೇ ಕೊಂದುಹಾಕಿದೆ. ಅಷ್ಟೇ ಅಲ್ಲದೇ ವಿಷಕಾರಿ ರಾಸಾಯನಿಕ ಮಿಶ್ರಿತ ನೀರು ಕೆರೆಯಲ್ಲಿ ಮಡುಗಟ್ಟಿ ನಿಲ್ಲುವ ಮೂಲಕ ಅಂತರ್ಜಲದ ಆರೋಗ್ಯಕ್ಕೂ ಕುತ್ತು ತಂದಿದೆ.
ನಮ್ಮ ಕಣ್ಣೆದುರೇ ಇಷ್ಟೆಲ್ಲಾ ಅನಾಹುತವಾಗುತ್ತಿದ್ದರೂ ಸಹ ನಾವು ಕಂಡೂ ಕಾಣದಂತಿರುವುದು ನಾವು ನಮಗೇ ಮಾಡಿಕೊಳ್ಳುತ್ತಿರುವ ದ್ರೋಹವಲ್ಲವೇ…!? ನಾವು ನಮ್ಮ ಮಕ್ಕಳಿಗೆ ಏನನ್ನುಳಿಸಿ ಹೋಗುತ್ತಿದ್ದೇವೆ ? ಅನಾರೋಗ್ಯ ಪೀಡಿತ ಪರಿಸರವನ್ನಲ್ಲವೇ…!ನಮಗ್ಯಾಕೆ ಇಲ್ಲದ ತಲೆಬಿಸಿ ಅದನ್ನೆಲ್ಲಾ ಸರಿ ಮಾಡಲು ಸರ್ಕಾರವಿಲ್ಲವಾ? ಎಂದು ಹಿಂದಕ್ಕೆ ಜಾರುವವರಿಗೆ ಯಾವತ್ತಿಗೂ ಕೇಳಬೇಕಾದ ಪ್ರಶ್ನೆ, ನೀವು ಈ ಪರಿಸರದ ಭಾಗವಲ್ಲವೇ? ನಾವು ಕುಡಿಯುತ್ತಿರುವ ನೀರು, ತಿನ್ನುತ್ತಿರುವ ತರಕಾರಿ ಇದೇ ಕಲುಷಿತ ನೀರಿನಿಂದ ಬೆಳೆಯುತ್ತಿರುವುದು ಎಂಬ ಸೂಕ್ಷ್ಮ ವಿಚಾರ ನಿಮಗೆ ಅರ್ಥವಾಗುತ್ತಿಲ್ಲವೇ…?
ಚಿಕ್ಕಮಗಳೂರು ನಗರದ ನಡುವೆ ಸಂಪೂರ್ಣ ಕಲುಷಿತಗೊಂಡು ಹರಿಯುತ್ತಿರುವ ಯಗಚಿ ಹೊಳೆ ಸೇರುತ್ತಿರುವುದು ಯಾವ ಅಣೆಕಟ್ಟೆಗೆ, ಯೋಚಿಸಿದ್ದೀರಾ? ಪ್ರತಿನಿತ್ಯ ನಾವು ಕುಡಿಯುತ್ತಿರುವ ನೀರಿನ ಆರೋಗ್ಯದ ಕುರಿತು ಎಂದಾದರೂ ಆಲೋಚಿಸಿದ್ದೇವೆಯೇ? ಕನಿಷ್ಟ ಈಗಲಾದರೂ ಎಚ್ಚೆತ್ತುಕೊಳ್ಳೋಣ. ನಮ್ಮೂರಿನ ಕೆರೆ ಶುದ್ಧೀಕರಣಕ್ಕಾಗಿ ಗಟ್ಟಿ ಧ್ವನಿಯಿಂದ ಆಗ್ರಹಿಸೋಣ. ಪ್ರಬಲ ಸಾಮಾಜಿಕ ಮಾಧ್ಯಮದ ಮೂಲಕ ಈ ವಿಚಾರವನ್ನು ನಮ್ಮೂರಿನ ನಾಗರಿಕರಿಗೆ ತಲುಪಿಸೋಣ, ಇನ್ನಷ್ಟು ಪ್ರಜ್ಞಾವಂತರಾಗೋಣ. ಅಯೋಗ್ಯ ಜನಪ್ರತಿನಿಧಿಗಳು ಅವಿವೇಕಿ ಅಧಿಕಾರಿಗಳನ್ನು ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸೋಣ.
ಚಿತ್ರ ಕೃಪೆ:- ಗೂಗಲ್
-ಕಾರ್ತಿಕಾದಿತ್ಯ ಬೆಳ್ಗೋಡು
ಹವ್ಯಾಸಿ ಬರಹಗಾರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel