ಬೆಂಗಳೂರು ನಗರದಲ್ಲಿ ಅನೇಕ ವರ್ಷಗಳಿಂದ ‘ಬಿ ಖಾತಾ’ ಹೊಂದಿರುವ ಆಸ್ತಿಗಳ ಸಮಸ್ಯೆಯೊಂದು ಮುಂದುವರಿದಿತ್ತು. ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದಿರದ, ಅಥವಾ ಸಂಪೂರ್ಣವಾಗಿ ರೂಪಿಸಲ್ಪಟ್ಟಿರದ ಸೈಟ್‌ಗಳಿಗೆ ಬಿಬಿಎಂಪಿ ‘ಬಿ ಖಾತಾ’ ನೀಡುತ್ತಿತ್ತು. ಈ ಖಾತೆಯಿಂದ ತೆರಿಗೆ ಪಾವತಿ ಸಾಧ್ಯವಿತ್ತು, ಆದರೆ ಆಸ್ತಿ ಸಂಪೂರ್ಣ ಕಾನೂನುಬದ್ಧವಾಗದ ಕಾರಣ ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ತೊಂದರೆಗಳು ಎದುರಾಗುತ್ತಿದ್ದವು.
ಇದೀಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದೆಂಬ ಆಶಾಕಿರಣ ಮೂಡಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಈ ಕುರಿತು ಸುಳಿವು ನೀಡಿದ್ದು, ಬಿಬಿಎಂಪಿಯಿಂದ ‘ಬಿ ಖಾತಾ’ ನೀಡುವ ಪ್ರಕ್ರಿಯೆ ಸ್ಥಗಿತಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಅವರ ಪ್ರಕಾರ, ಬದಲಿಗೆ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸಿ ಆಸ್ತಿಗೆ ನೇರವಾಗಿ ‘ಎ ಖಾತಾ’ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದ್ದು, ಅನುಮೋದನೆ ಸಿಕ್ಕರೆ ಸಾವಿರಾರು ಆಸ್ತಿ ಮಾಲೀಕರಿಗೆ ಇದರಿಂದ ಪ್ರಯೋಜನವಾಗಲಿದೆ.
ಈ ಪ್ರಸ್ತಾವನೆ ಜಾರಿಗೆ ಬಂದ್ರೆ, ಅನುದಾನಿತ ಪ್ರದೇಶದ ಸೈಟ್‌ಗಳಿಗೆ ಕಾನೂನುಬದ್ಧತೆ ಸಿಗುತ್ತದೆ ಮತ್ತು ಮಾಲೀಕರು ತಮ್ಮ ಆಸ್ತಿಗಳನ್ನು ಲೆಕ್ಕಪತ್ರಗಳಲ್ಲಿ ಸರಿಯಾಗಿ ದಾಖಲಿಸಬಹುದು. ಇನ್ನು ಮುಂದೆ ಸಾಲ ಪಡೆಯುವುದು, ಆಸ್ತಿ ಮಾರಾಟ ಮಾಡುವುದೂ ಸುಲಭವಾಗಲಿದೆ.
ಇದರಿಂದ ಆಸ್ತಿ ಮಾಲೀಕರಲ್ಲಿ ನಿರೀಕ್ಷೆಯ ಹುಮ್ಮಸ್ಸು ಮೂಡಿದ್ದು, ಈಗಾಗಲೇ ಹಲವರು ಬಿಬಿಎಂಪಿಯ ಹೊಸ ಮಾರ್ಗಸೂಚಿಗಳಿಗಾಗಿ ಕಾಯುತ್ತಿದ್ದಾರೆ.








