ಕ್ರಿಕೆಟ್ ಆಟ ಪುನರಾರಂಭದ ಬಗ್ಗೆ ಬಿಸಿಸಿಐ ಸೂಚಿಸಿರುವ ಎಸ್‍ಒಪಿಯಲ್ಲಿ ಏನೇನು ಇದೆ..!
ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿದೆ. ಈ ನಡುವೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜನೆ ಮಾಡಲು ಮುಹೂರ್ತ ಕೂಡ ಫಿಕ್ಸ್ ಮಾಡಿದೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಪಂದ್ಯಗಳು ನಡೆಯಲಿವೆ.
ಕೋವಿಡ್-19 ಮಾರ್ಗಸೂಚಿ, ಶಿಷ್ಟಚಾರಗಳ ಜೊತೆ ಬಿಸಿಸಿಐ 100 ಪುಟಗಳ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ನಲ್ಲಿ ಹಲವಾರು ಷರತ್ತುಗಳನ್ನು ವಿಧಿಸಿದೆ. ಅಲ್ಲದೆ ಆಟಗಾರರು ತರಬೇತಿ ಶಿಬಿರ ನಡೆಸುವುದಕ್ಕಿಂತ ಮುನ್ನ ಒಪ್ಪಂದ ಪತ್ರಕ್ಕೆ ಸಹಿ ಮಾಡಬೇಕಾಗುತ್ತದೆ. ಭಾನುವಾರ ಬಿಸಿಸಿಐ ತನ್ನ ರಾಜ್ಯ ಸಂಸ್ಥೆಗಳಿಗೆ ಈ ವಿಷಯವನ್ನು ತಿಳಿಸಿದ್ದು, 60 ವರ್ಷ ಮೆಲ್ಪಟ್ಟವರನ್ನು ಮತ್ತು ವೈದ್ಯಕಿಯ ತೊಂದರೆಗೊಳಪಟ್ಟವರನ್ನು ನಿರ್ಬಂದ ಹೇರುವಂತೆ ಎಸ್‍ಒಪಿಯಲ್ಲಿ ಸೂಚಿಸಿದೆ. 100 ಪುಟಗಳ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್ ಪ್ರಕಾರ ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ತರಬೇತಿ ನಡೆಸುತ್ತಿರುವುದರಿಂದ ಕ್ರಿಕೆಟಿಗರು ಅಪಾಯಗಳನ್ನು ಅಂಗೀಕರಿಸುವ ಅರ್ಜಿಗೆ ಸಹಿ ಹಾಕಬೇಕಾಗುತ್ತದೆ. 2019-20ರ ದೇಶಿ ಕ್ರಿಕೆಟ್ ಋತು ಕಳೆದ ಮಾರ್ಚ್‍ಗೆ ಅಂತ್ಯಗೊಂಡಿದೆ. 2020-21ರ ದೇಶಿ ಕ್ರಿಕೆಟ್ ಋತು ಆಗಸ್ಟ್ ತಿಂಗಳಿನಿಂದ ಆರಂಭವಾಗಬೇಕಿತ್ತು. ಆದ್ರೆ ಕೊರೋನಾ ವೈರಸ್ ಅಡ್ಡಿಯನ್ನುಂಟು ಮಾಡಿದೆ.
ಇನ್ನು ತರಬೇತಿ ಶುರು ಮಾಡುವುದಕ್ಕಿಂತ ಮುನ್ನ ಆಟಗಾರರು ಮತ್ತು ಸಿಬ್ಬಂದಿಗಳ ಆರೋಗ್ಯ ಸುರಕ್ಷತೆಯು ಆಯಾ ಕ್ರಿಕೆಟ್ ಸಂಸ್ಥೆಗಳ ಜವಾಬ್ದಾರಿಯಾಗಿವೆ. ಅದೇ ರೀತಿ 60 ವರ್ಷ ಮೇಲ್ಪಟ್ಟ ಸಿಬ್ಬಂದಿಗಳು, ಅಧಿಕಾರಿಗಳು ಮತ್ತು ಗ್ರೌಂಡ್ ಸಿಬ್ಬಂದಿಗಳು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಗಳು ಸರ್ಕಾರದ ಮಾರ್ಗಸೂಚಿಗಳು ಬರುವ ತನಕ ತರಬೇತಿ ಶಿಬಿರದಲ್ಲಿ ಭಾಗವಹಿಸುವಂತಿಲ್ಲ.
ಶಿಬಿರವನ್ನು ಆರಂಭಿಸುವ ಮುನ್ನ ವೈದ್ಯಕೀಯ ತಂಡವು ಆಟಗಾರರ ಮತ್ತು ಸಿಬ್ಬಂದಿಗಳ ಪ್ರಯಾಣ ಮತ್ತು ವೈದ್ಯಕೀಯ ವರದಿಗಳನ್ನು ಆನ್ ಲೈನ್ ಪ್ರಶ್ನಾವಳಿಯ ಮೂಲಕ ಪಡೆದುಕೊಳ್ಳಬೇಕು. ಕೋವಿಡ್ ರೋಗ ಲಕ್ಷಣಗಳು ಹೊಂದಿರುವ ಯಾರೇ ಆಗಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೇ ಒಂದು ದಿನದಲ್ಲಿ ಎರಡು ಪರೀಕ್ಷೆಗಳನ್ನು (ಮೊದಲ ದಿನ ಅಥವಾ ಮೂರನೇ ದಿನ) ಮಾಡಿಕೊಳ್ಳಬೇಕು. ಎರಡು ಪರೀಕ್ಷೆಗಳನ್ನು ನೆಗೆಟಿವ್ ಬಂದ್ರೆ ಮಾತ್ರ ತರಬೇತಿ ಶಿಬಿರದಲ್ಲಿ ಸೇರಿಸಿಕೊಳ್ಳಬೇಕು. ಈ ಪರೀಕ್ಷೆಗಳನ್ನು ಮುಖ್ಯ ವೈದ್ಯಾಧಿಕಾರಿ ನಡೆಸಬೇಕು ಎಂದು ಬಿಸಿಸಿಐ ಎಸ್‍ಒಪಿಯಲ್ಲಿ ತಿಳಿಸಿದೆ.
ಕ್ರೀಡಾಂಗಣಕ್ಕೆ ಹೋಗುವಾಗ ಆಟಗಾರರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಎನ್ -95 ಮಾಸ್ಕ್ ಧರಿಸಬೇಕು. ಅಲ್ಲದೆ ತಮ್ಮದೇ ವಾಹನಗಳಲ್ಲಿ ಕ್ರೀಡಾಂಗಣಕ್ಕೆ ತೆರಳಬೇಕು. ಶಿಬಿರದ ಮೊದಲ ದಿನ ಮುಖ್ಯ ವೈದ್ಯಾಧಿಕಾರಿ ವೈಯಕ್ತಿಕ ಶಿಕ್ಷಣದ ಕಾರ್ಯಗಾರವನ್ನು ನಡೆಸಬೇಕು ಎಂದು ಬಿಸಿಸಿಐ ಎಸ್‍ಒಪಿಯಲ್ಲಿ ಸ್ಪಷ್ಟಪಡಿಸಿದೆ.