ಬೆಂಗಳೂರು: ಹೊಸ ವರ್ಷಾಚರಣೆ ಆಚರಿಸುವುದಕ್ಕಾಗಿ ಜನರು ಈ ಬಾರಿ ಉತ್ಸುಕರಾಗಿದ್ದಾರೆ. ಆದರೆ, ಸರ್ಕಾರ ಈ ನಿಯಮ ಜಾರಿಗೊಳಿಸಿದ್ದು, ಪ್ರತಿಯೊಬ್ಬರೂ ಆಚರಿಸುವುದು ಕಡ್ಡಾಯವಾಗಿದೆ.
ಈ ವರ್ಷವೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ವಿವಿಧ ಇಲಾಖೆಗಳು ಸಭೆ ನಡೆಸಿ ಕೆಲವೊಂದು ನಿಯಮ ಜಾರಿಗೊಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (B Dayanand) ಈ ಬಾರಿ ಸಿಲಿಕಾನ್ ಸಿಟಿಯ ಎಂಜಿ ರೋಡ್, ಬ್ರಿಗೆಡ್ ರೋಡ್, ರೆಸಿಡೆನ್ಸಿ ರೋಡ್, ಟ್ರಿನಿಟಿ ಸರ್ಕಲ್, ಫಿನಿಕ್ಸ್ ಮಾಲ್, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ, ಸ್ಟಾರ್ ಹೋಟೆಲ್‌ಗಳು ಸೇರಿದಂತೆ ಪಬ್ ಕ್ಲಬ್‌ಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ.
ಕೇಂದ್ರ ವಿಭಾಗದ ವಿವಿಧ ರಸ್ತೆಗಳಲ್ಲಿ ಮೂರು ಸಾವಿರ ಪೊಲೀಸರ ನಿಯೋಜನೆ, ಮಹಿಳಾ ಅಧಿಕಾರಿಗಳ ಜೊತೆಗೆ ಆಯಾಕಟ್ಟಿನ ಸ್ಥಳಗಳಲ್ಲಿ ವುಮೆನ್ ಸೇಫ್ಟಿ ಐಸ್‌ಲ್ಯಾಂಡ್‌ಗಳ ನಿರ್ಮಾಣ, ಮಕ್ಕಳು, ಮಹಿಳೆಯರು, ಕಳುವಾದ ವಸ್ತುಗಳ ರಕ್ಷಣೆಗಾಗಿ ಪೊಲೀಸ್ ಕಿಯೋಸ್ಕ್‌ಗಳ ನಿರ್ಮಾಣ, ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ವಾಚ್ ಟವರ್‌ಗಳ ನಿರ್ಮಾಣ, ಬೈನಾಕ್ಯುಲರ್‌ಗಳ ಮೂಲಕ ನಿಗಾ ಇಡುವುದಕ್ಕೆ ಸಿದ್ಧತೆ ಮಾಡಲಾಗಿದೆ.
ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಬ್ರಿಗೆಡ್ ರೋಡ್, ಮೇಯೋ ಹಾಲ್ ಜಂಕ್ಷನ್, ಒಪೇರಾ ಜಂಕ್ಷನ್‌ವರಗೆ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಂಜಿ ರೋಡ್ ಮೆಟ್ರೋ ಸ್ಟೇಷನ್‌ನಲ್ಲಿ ಜನಸಂದಣಿ ಹಿನ್ನೆಲೆ ರಾತ್ರಿ 11 ಗಂಟೆಯಿಂದ 2 ಗಂಟೆವರೆಗೆ ನಿರ್ಗಮನಕ್ಕೆ ಮಾತ್ರ ಅವಕಾಶ. ಟ್ರಿನಿಟಿ ಸರ್ಕಲ್ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ಬಳಸಲು ಮನವಿ ಮಾಡಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲು ಸೂಚಿಸಲಾಗಿದೆ.
ಹೊಸ ವರ್ಷಕ್ಕೆ ನಗರಾದ್ಯಂತ ಸುಮಾರು 10 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕ್ಲಬ್ ಗಳು, ರೆಸ್ಟೋರೆಂಟ್‌ಗಳು ಪಾರ್ಟಿಗಳು ನಿಗದಿತ ಸಮಯಕ್ಕೆ ಮುಗಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಮಧ್ಯರಾತ್ರಿ ಒಂದು ಗಂಟೆಯವರೆಗೆ ಮಾತ್ರ ಕ್ಲಬ್‌ಗಳು, ರೆಸ್ಟೋರೆಂಟ್‌ಗಳಿಗೆ ಅನುಮತಿ ನೀಡಲಾಗಿದೆ. ಸಮಯ ಮಿರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಅಹಿತರಕರ ಘಟನೆಗಳು, ಡ್ರಗ್ಸ್ ಪಾರ್ಟಿಗಳು ಗಮನಕ್ಕೆ ಬಂದರೆ 112ಕ್ಕೆ ಕರೆ ಮಾಡಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.