ರಾಮನಗರ: ನಮ್ಮ ಹೋರಾಟದ ಕಾವು ಕಾಂಗ್ರೆಸ್ಸಿಗೆ (Congress) ತಟ್ಟಿದೆ. ಹೀಗಾಗಿಯೇ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನು ರಕ್ಷಿಸುವಂತೆ ಎಲ್ಲ ಸಚಿವರು, ಶಾಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y Vijayendra) ಹೇಳಿದ್ದಾರೆ.
ರಾಮನಗರದ ಕೆಂಗಲ್ ನಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟದ ಬಿಸಿ ಮುಟ್ಟಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ವೇಣುಗೋಪಾಲ್, ಸುರ್ಜೇವಾಲಾ ಅವರು ಬಂದು ಶಾಸಕರಿಗೆ ಪಾಠ ಮಾಡಿದ್ದಾರೆ. ಮುಖ್ಯಮಂತ್ರಿಗಳನ್ನು ರಕ್ಷಿಸಲು ಸೂಚಿಸಿದ್ದಾರೆ. ಹಗರಣದಲ್ಲಿ ಮುಳುಗಿದ ಸರ್ಕಾರದ ಮತ್ತು ಮುಖ್ಯಮಂತ್ರಿಗಳನ್ನು ಬಲವಾಗಿ ಸಮರ್ಥನೆ ಮಾಡಲು ದೆಹಲಿ ಗಾಂಧಿ ಕುಟುಂಬದ ಸಂದೇಶ ಹೊತ್ತು ತಂದು ಹೇಳಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮದು ನೆಪ ಮಾತ್ರಕ್ಕೆ ಮಾಡುವ ಹೋರಾಟವಲ್ಲ, ಮೈಸೂರು ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರದಿಂದ ನಾಡಿನ ಪರಿಶಿಷ್ಟ ಸಮುದಾಯಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಈ ಭ್ರಷ್ಟ ಸರ್ಕಾರದ ವಿರುದ್ಧ ನಾವು ಪಾಠ ಕಲಿಸುವವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ವಯನಾಡಿನಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳು 100 ಮನೆಗಳನ್ನು ಘೋಷಿಸಿದ್ದಾರೆ. ಇದು ತಪ್ಪೇನಲ್ಲ, ಒಳ್ಳೆಯ ಕ್ರಮ. ಆದರೆ, ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಲಕ್ಷಾಂತರ ಬಡವರು, ನಿರ್ಗತಿಕರು ಸಲ್ಲಿಸಿದ ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳು ಹಾಗೇ ಬಿದ್ದಿವೆ. ಈ ಕುರಿತು ಸಿಎಂ ತಲೆ ಕೆಡಿಸಿಕೊಂಡಿಲ್ಲ. ಇವರಿಗೆ ಲೂಟಿ ಹೊಡೆಯುವುದು ಒಂದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಸಾಮಾನ್ಯ ಜನರು ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಗುಡುಗಿದ್ದಾರೆ.