ಬೆಂಗಳೂರು : ಬೇಗೂರು ಠಾಣೆಯ ಕೊರೊನಾ ಸೋಂಕಿತ ಪೊಲೀಸ್ ಪೇದೆಗೆ ಚಾಮರಾಜನಗರದ ನಂಟು ಇರೋದು ಬೆಳಕಿಗೆ ಬಂದಿದ್ದು, ಗಡಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಭಾನುವಾರ ಬೆಳಗ್ಗೆ 10.30 ರ ಸುಮಾರಿಗೆ ಹನೂರು ತಾಲೂಕಿನ ಬೆಳ್ತೂರು ಗ್ರಾಮದಲ್ಲಿರೋ ನೆಂಟರ ಮನೆಗೆ ಪೊಲೀಸ್ ಪೇದೆ ಭೇಟಿ ನೀಡಿ, ಅಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ. ಪೇದೆಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಬಳಿಕ ಇಂದು ಬೆಳ್ತೂರು ಗ್ರಾಮಕ್ಕೆ ವೈದ್ಯ ಪ್ರಕಾಶ್ ನೇತೃತ್ವದ ತಂಡ ಭೇಟಿ ನೀಡಿದೆ. ಅಲ್ಲದೆ ಪೇದೆ ಸಂಪರ್ಕವನ್ನು ಹೊಂದಿರುವ 15-20 ಜನರನ್ನು ಗುರುತಿಸಿ ಚಾಮರಾಜ ನಗರದ ಜಿಲ್ಲಾ ಕ್ವಾರಂಟೈನ್ ಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆಂದು ತಿಳಿದುಬಂದಿದೆ.
40 ವರ್ಷದ ಪೇದೆ ಮೈಕೋ ಲೇಔಟ್ ನಿವಾಸಿಯಾಗಿದ್ದಾರೆ. ಹುಷಾರಿಲ್ಲ ಎಂದು ಪೇದೆ 20 ದಿನ ರಜೆ ತೆಗೆದುಕೊಂಡಿದ್ದರು. ಆರೋಗ್ಯದಲ್ಲಿ ಕೊಂಚ ಚೇತರಿಕೆ ಬಳಿಕ ಮುಂಜಾಗ್ರತಾ ಕ್ರಮವಾಗಿ ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ರಜೆ ಮುಗಿಸಿ ನಿನ್ನೆ ಪೇದೆ ಡ್ಯೂಟಿ ಹಾಜರಾಗಿದ್ರು. ಠಾಣೆಗೆ ಬಂದ ಕೆಲವೇ ಗಂಟೆಗಳಲ್ಲಿ ಅವರ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿತ್ತು.
ಸದ್ಯ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಮಂದಿ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 60ಕ್ಕೂ ಹೆಚ್ಚು ಮಂದಿಯನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ ಗೆ ಒಳಪಡಿಸಿದೆ. ಅಲ್ಲದೇ, ಅವರ ಮನೆಯ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಲು ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.