ಬೆಳಗಾವಿ `ಲೋಕ ಕದನ’ | `ಜಾರಕಿಹೊಳಿ ಬ್ರದರ್ಸ್’ ಬದ್ಧವೈರಿಗೆ `ಕೈ’ ಟಿಕೆಟ್..?
ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಯಾವುದೇ ಕ್ಷಣದಲ್ಲಾದ್ರೂ ಘೋಷಣೆ ಆಗುವ ಸಾಧ್ಯತೆ ಇದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೋ ಚರ್ಚೆ ಜೋರಾಗಿ ನಡೆಯುತ್ತಿದೆ. ಬೆಳಗಾವಿಯಲ್ಲಿ ಈ ಬಾರಿ ಗೆಲುವಿನ ಕೇಕೆ ಹಾಕಲೇಬೇಕೆಂದು ಕಾಂಗ್ರೆಸ್ ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಅಭ್ಯರ್ಥಿ ಹುಡುಕುವ ಕೆಲಸ ಶುರುವಾಗಿದೆ. ಇದರಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮಿಹೆಬ್ಬಾಳ್ಕರ್ ಸೇರಿದಂತೆ ಹಲವು ಹೆಸರುಗಳು ಬರುತ್ತಿವೆ. ಇತ್ತ ಬಿಜೆಪಿ ಕೂಡ ಈ ಎಲೆಕ್ಷನ್ ನಲ್ಲಿ ಗೆದ್ದು ತಮ್ಮ ತಾಕತ್ತು ಪ್ರದರ್ಶಿಸುವ ಪ್ಲಾನ್ ಮಾಡಿಕೊಂಡಿದೆ. ಬಿಜೆಪಿ ಟಿಕೆಟ್ ಗಾಗಿ ಹಲವರು ಪೈಪೋಟಿ ನಡೆಸುತ್ತಿದ್ದಾರೆ.
`ಜಾರಕಿಹೊಳಿ ಬ್ರದರ್ಸ್’ ಬದ್ಧವೈರಿಗೆ `ಕೈ’ ಟಿಕೆಟ್..?
ಬೆಳಗಾವಿಯಲ್ಲಿ ಜಾರಕಿಹೊಳಿ ಕಡಿಮೆ ಏನಿಲ್ಲಾ..! ಸಚಿವ ರಮೇಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ತಮ್ಮದೇಯಾದ ಪ್ರಭಾವವನ್ನು ಹೊಂದಿದ್ದಾರೆ. ಈ ಬಾರಿಯ ಬೆಳಗಾವಿ ಲೋಕಕದನ ಇವರಿಬ್ಬರ ನಡುವಿನ ದಂಗಲ್ ಅಂತಲೇ ಅಂದಾಜಿಸಲಾಗುತ್ತಿದೆ. ಹೀಗಾಗಿ ಈ ಚುನಾವಣೆ ಭಾರಿ ಕುತೂಹಲವನ್ನ ಕೆರಳಿಸಿದೆ. ಈ ಮಧ್ಯೆ ಇದೇ ಮೊದಲ ಬಾರಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನಾನೂ ಟಿಕೆಟ್ ಆಕಾಂಕ್ಷಿ ಅಂತಾ ಬಹಿರಂಗವಾಗಿ ಹೇಳಿದ್ದಾರೆ. ಅವರೇ ಲಕ್ಕಣ್ಣ ಸವಸುದ್ದಿ. ಇವರು ಕಳೆದ 20 ವರ್ಷಗಳಿಂದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಜಾರಕಿಹೊಳಿ ಬ್ರದರ್ಸ್ ಬದ್ಧವೈರಿ ಅಂತಾನೇ ಜಿಲ್ಲಾ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ.
ತಾವು ಈ ಬಾರಿಯ ಟಿಕೆಟ್ ಆಕಾಂಕ್ಷಿಯಂದು ಬಹಿರಂಗವಾಗಿ ಹೇಳಿಕೊಂಡಿರುವ ಅವರು, ನಾನು 20 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯನಾಗಿದ್ದೇನೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಾನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ಪಕ್ಷ ಸಹ ಕೇಡರ್ ಬೇಸ್ ಪಾರ್ಟಿ ಎಂಬ ಸಂದೇಶ ಸಾರಿದ ಹಾಗೇ ಆಗುತ್ತೆ. ಈಗಾಗಲೇ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕರ ಭೇಟಿಯಾಗಿ ಚರ್ಚೆ ಮಾಡಿದ್ದು ತಮಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದ್ದಾಗಿ ಲಕ್ಕಣ್ಣ ಸವಸುದ್ದಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಬೆಳಗಾವಿ ಲೋಕಸಭಾ ಉಪಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಶತಯಾಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿವೆ. ಅದರಲ್ಲೂ ಕಾಂಗ್ರೆಸ್ ನಾಯಕರು ಈಗ ಕೇಡರ್ ಬೇಸ್ ಪಾರ್ಟಿ ಕಟ್ಟೋದಾಗಿ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದು, ಈ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತಾರಾ ಕಾದು ನೋಡಬೇಕಾಗಿದೆ.
