ರಾಯಚೂರು: ಶಿಕ್ಷಕಿಯೊಬ್ಬರು ಪಾರ್ಟ್ ಟೈಂ ಕೆಲಸದ ಆಫರ್ ನಂಬಿ ಬರೋಬ್ಬರಿ 2.77 ಕೋಟಿ ರೂ. ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಶಿಕ್ಷಕಿ 2023ರ ಸೆಪ್ಟೆಂಬರ್ 3ರಿಂದ ಜ. 12ರ ವರೆಗೆ ಇಲ್ಲಿಯವರೆಗೆ ಹಣ ಕಳೆದುಕೊಂಡಿದ್ದಾರೆ. ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಶಿಕ್ಷಕಿಯು ಪಾರ್ಟ್ ಟೈಂ ಕೆಲಸ ಹುಡುಕುತ್ತಿದ್ದ ವೇಳೆ ಅವರ ವಾಟ್ಸಾಪ್ ನಲ್ಲಿ ಸಂದೇಶ ಬಂದಿದೆ. ವಿಮಾನ ಟಿಕೆಟ್ ಕಾಯ್ದಿರಿಸಲು ಪಾರ್ಟ್‌ಟೈಮ್ ಕೆಲಸ ಮಾಡುವವರನ್ನು ಹುಡುಕುತ್ತಿದ್ದೇವೆ ಎಂದು ಜಾಹೀರಾತು ಬಂದಿದೆ. ಇದರಿಂದ ದಿನಕ್ಕೆ 1 ಸಾವಿರ ರೂ. ನಿಂದ 3,600 ರೂ. ವರೆಗೆ ಗಳಿಸಬಹುದು ಎಂಬ ಆಫರ್ ಅದರಲ್ಲಿ ನೀಡಲಾಗಿದೆ. ಅದರಲ್ಲಿ ಲಿಂಕ್ ಕೂಡ ಇತ್ತು.
ಶಿಕ್ಷಕಿಯು ಇದನ್ನು ನಂಬಿ ಕೆಲಸ ಆರಂಭಿಸಿದ್ದರು. ಆಗ ವಂಚಕರು ಶಿಕ್ಷಕಿಗೆ ಲಿಂಕ್ ಕಳುಹಿಸಿ, ಭರ್ತಿ ಮಾಡಲು ತಿಳಿಸುತ್ತಿದ್ದರು. ನಂತರ ವಂಚಕರು ಹಣ ಬಿಡುಗಡೆ ಮಾಡಲು ವಿವಿಧ ಶುಲ್ಕ ಪಾವತಿಸುವಂತೆ ಕೇಳಿದ್ದಾರೆ. ಮಹಿಳೆಯು ಇದನ್ನು ನಂಬಿ ಜನವರಿ ವೇಳೆಗೆ 82 ವಿವಿಧ ಖಾತೆಗಳಿಗೆ ಬರೋಬ್ಬರಿ 2.77 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸಾಲ ಮಾಡಿ ಕೂಡ ಶಿಕ್ಷಕಿ ಹಣ ಹಾಕಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.








