ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯವಸ್ತಗೊಂಡಿದೆ. ದಸರಾ ಹಬ್ಬ ಆಚರಣೆ ಸಂಭ್ರಮದಲ್ಲಿರುವ ಸಿಲಿಕಾನ್ ಸಿಟಿ ಜನತೆಗೆ ವರುಣ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಿದ್ದಾನೆ.
ಅದರಲ್ಲೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಕೆರೆಹಳ್ಳಿ, ದತ್ತಾತ್ರೇಯ ಲೇಔಟ್, ಜಯನಗರ, ಜೆ.ಪಿ ನಗರ, ಕೆಂಗೇರಿ, ಕೋರಮಂಗಲ ಸೇರಿದಂತೆ ದಕ್ಷಿಣ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ.
..!
ನಿನ್ನೆ ಸುರಿದ ಮಳೆಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮಗು ಹಾಗೂ ವ್ಯಕ್ತಿಯೊಬ್ಬರನ್ನು ರಕ್ಷಣೆ ಮಾಡಲಾಗಿದೆ. ಹೊಸಕೆರೆಹಳ್ಳಿ ಸೇರಿದಂತೆ 780ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ನಿಶ್ಚಿತಾರ್ಥ ಸಂಭ್ರಮ ಕಸಿದ ಮಳೆ
ಕೆಂಗೇರಿಯಲ್ಲೂ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಭಾರಿ ಅವಾಂತರ ಸೃಷ್ಟಿಸಿದೆ. ಕೆಂಗೇರಿ ಉಪನಗರದ ಶೀತಲ್ ಎಂಬುವರ ಮನೆಯಲ್ಲಿ ಇಂದು ನಿಶ್ಚಿತಾರ್ಥ ನಿಗದಿಯಾಗಿತ್ತು. ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಶೀತಲ್‍ರ ನಿಶ್ಚಿತಾರ್ಥ ಸಂಭ್ರಮವನ್ನು ಮಳೆ ಕಸಿದುಕೊಂಡಿದೆ. ಮನೆಯಲ್ಲಿದ್ದ ಶೀತಲ್, ಅಜ್ಜಿ, ತಂದೆ-ತಾಯಿ ರಾತ್ರಿಯಿಡಿ ಜಾಗರಣೆ ಮಾಡಿದ್ದು, ಮನೆಯಿಂದ ನೀರು ಹೊರಹಾಕುವುದರಲ್ಲೇ ಸುಸ್ತಾಗಿದ್ದಾರೆ.
ರಾಮಚಂದ್ರಾಪುರ ಮಠದಲ್ಲೂ ಅವಾಂತರ..!
ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠಕ್ಕೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮಠದ ಗೋದಾಮಿಗೆ ನೀರು ನುಗ್ಗಿ ನೂರಾರು ಮೂಟೆ ಅಕ್ಕಿ, ಸಕ್ಕರೆ, ಗೋದಿ, ಬೇಳೆ, ಗೋಡಂಬಿ ಸೇರಿದಂತೆ ಗೋದಾಮಿನಲ್ಲಿದ್ದ ಅಗತ್ಯ ವಸ್ತುಗಳು ಮಳೆ ನೀರಿನಲ್ಲಿ ತೇಲಿ ಹೋಗಿವೆ.
ದೇಗುಲದ ಗೋಡೆ ಕುಸಿತ
ಗವಿಪುರಂನಲ್ಲಿರುವ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇಗುಲದ ಗೋಡೆಯೊಂದು ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೆಂಗೇರಿಯಲ್ಲಿ 109 ಮಿ.ಮೀ ದಾಖಲೆ ಮಳೆ
ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನಿನ್ನೆ ದಾಖಲೆಯ ಮಳೆ ಸುರಿದಿದೆ. ಕೆಂಗೇರಿಯಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ 109 ಮಿ.ಮೀ ಮಳೆ ಸುರಿದಿದೆ. ಆರ್.ಆರ್ ನಗರದಲ್ಲಿ 109, ಹೆಮ್ಮಿಗೆಪುರ 107, ಉಲ್ಲಾಳ 107, ವಿದ್ಯಾಪೀಠದಲ್ಲಿ 97 ಮಿ.ಮೀ, ಉತ್ತರಹಳ್ಳಿಯಲ್ಲಿ 87.5 ಮಿ.ಮೀ, ಕೋಣನಕುಂಟೆ, ಬೊಮ್ಮನಹಳ್ಳಿಯಲ್ಲಿ 85 ಮಿ.ಮೀ ಮಳೆ ಸುರಿದಿದೆ.
ದಾಖಲೆ ಮಳೆ ಸುರಿದ ಪ್ರದೇಶಗಳು…
ಕೆಂಗೇರಿ-109 ಮಿ.ಮೀ
ಆರ್.ಆರ್ ನಗರ-109 ಮಿ.ಮೀ
ಹೆಮ್ಮಿಗೆಪುರ-107 ಮಿ.ಮೀ
ವಿದ್ಯಾಪೀಠ-97 ಮಿ.ಮೀ
ಹೊಸಕೆರೆಹಳ್ಳಿ 96.5 ಮಿ.ಮೀ
ಉತ್ತರಹಳ್ಳಿ-87.5 ಮಿ.ಮೀ
ಕೋಣನಕುಂಟೆ-85 ಮಿ.ಮೀ
ಬಸವನಗುಡಿ-81 ಮಿ.ಮೀ
ಕುಮಾರಸ್ವಾಮಿ ಲೇಔಟ್-80 ಮಿ.ಮೀ
ವಿವಿಪುರಂ-71 ಮಿ.ಮೀ
ಸಾರಕ್ಕಿ-65.5 ಮಿ.ಮೀ
ಲಕ್ಕಸಂದ್ರ, ದೊರೆಸ್ವಾಮಿಪಾಳ್ಯ-55 ಮಿ.ಮೀ
ಅರಕೆರೆ, ಕೊಡಿಗೆಹಳ್ಳಿ-52.5 ಮಿ.ಮೀ
ಗೊಟ್ಟಿಗೆರೆ-46 ಮಿ.ಮೀ
ಕೋರಮಂಗಲ-42ಮಿ.ಮೀ
ಜ್ಞಾನಭಾರತಿ ಕ್ಯಾಂಪಸ್-41 ಮಿ.ಮೀ
ವಿಜಯನಗರ-36 ಮಿ.ಮೀ
ಇನ್ನೂ ಎರಡು ದಿನ ಯಲ್ಲೋ ಅಲರ್ಟ್..
ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ನಿನ್ನೆ ಸುರಿದ ಮಳೆಗೆ ಬೆಂಗಳೂರು ತತ್ತರಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆರಡು ದಿನ ಇನ್ನೆಷ್ಟು ಅವಾಂತರ ಸೃಷ್ಟಿಸುತ್ತೋ ಎಂಬ ಆತಂಕ ಶುರುವಾಗಿದೆ.