ಬೆಂಗಳೂರು, : ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಭೇಟಿ ನೀಡಿ ಬರ ವೀಕ್ಷಣೆ ಮಾಡಿದ್ದು, ಮುಂದೆ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಆದರೆ ಈವರೆಗೆ ಬರ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರ ಹಣ ನೀಡಬೇಕೆಂದು ಮಾತ್ರ ಸರ್ಕಾರ ಆಗ್ರಹ ಮಾಡುತ್ತಿದೆ. ರಾಜ್ಯ ಸರ್ಕಾರದಿಂದ ಬರ ಘೋಷಣೆ ಮಾಡದೆ, ಕೇಂದ್ರ ಸರ್ಕಾರ ಅಧಿಕಾರಿಗಳ ತಂಡ ಕಳುಹಿಸುವುದಿಲ್ಲ. ನೀವೇ ಕೇಂದ್ರದಲ್ಲಿ ಯಾರನ್ನೂ ಭೇಟಿ ಮಾಡದೇ ಇದ್ದರೆ ಪರಿಹಾರ ಕೊಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಕಾಟಾಚಾರಕ್ಕೆ ಕೆಲವು ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ವರದಿ ನೀಡಿ ಎಷ್ಟು ಹಣ ನೀಡಿದ್ದಾರೆ ಎಂದು ತಿಳಿಸಿಲ್ಲ. ಒಂದು ತಾಲೂಕಿಗೆ ಕೇವಲ ಒಂದು ಕೋಟಿ ರೂ. ನೀಡಿದರೆ ಪ್ರಯೋಜನವಿಲ್ಲ. ಈ ಹಣದಿಂದ ಬೋರ್‌ವೆಲ್‌ಗಳನ್ನು ದುರಸ್ತಿ ಮಾಡುವುದು ಕೂಡ ಕಷ್ಟ. ವರದಿ ರೂಪಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಕೂಡಲೇ ಸಲ್ಲಿಸಬೇಕಿತ್ತು ಎಂದರು.
ಚುನಾವಣೆಗೆ ಸಮೀಪವಾಗುವಾಗ ಬಿಜೆಪಿ ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಪ್ರಕಾಶ್ ರಾಜ್, ಭಗವಾನ್ ಮೊದಲಾದವರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದರೂ ಅವರ ವಿರುದ್ಧ ಕ್ರಮ ಇರುವುದಿಲ್ಲ. ನೀಟ್ ಪ್ರತಿಭಟನೆ ಸಮಯದಲ್ಲಿ ಕೆಲವರು ಪೋಸ್ಟರ್‌ಗಳನ್ನು ಹಿಡಿದು ಪೊಲೀಸರಿಗೆ ಸವಾಲು ಹಾಕಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು ಸಿ.ಟಿ.ರವಿ ವಿರುದ್ಧ ಮಾತ್ರ ಎಫ್‌ಐಆರ್ ಮಾಡಿದ್ದಾರೆ. ಅವರ ಹೇಳಿಕೆಯನ್ನು ತಿರುಚಲಾಗಿದೆ. ಇದರ ವಿರುದ್ಧ ಚಿಕ್ಕಮಗಳೂರಿನಲ್ಲಿ ಹೋರಾಟ ಮಾಡಲಾಗುವುದು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಹತ್ತು ವರ್ಷಗಳಿಂದ ರಾಜಕೀಯ ನಿವೃತ್ತಿ ಎನ್ನುತ್ತಿದ್ದಾರೆ. ಚುನಾವಣೆ ಸಮೀಪ ಬಂದಾಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಹಿರಿಯ ನಾಯಕರಿಗೆ ಬೆದರಿಕೆ ಹಾಕಲು ಅವರು ಈ ರೀತಿ ನಾಟಕ ಮಾಡುತ್ತಿದ್ದಾರೆ. ಯಾವುದೇ ನಾಯಕರು ಶಾಶ್ವತವಲ್ಲ. ಯಾವ ನಾಯಕರು ಹೋದರೂ ಮತ್ತೊಬ್ಬರು ಬೆಳೆಯುತ್ತಾರೆ ಎಂದರು.








