ಬೆಂಗಳೂರು : ಚೆನ್ನೈ ಸೂಪರ್ ತಂಡವು ಬೆಂಗಳೂರು ವಿರುದ್ಧ ರೋಚಕ ಜಯ ಸಾಧಿಸಿದೆ. ಮ್ಯಾಕ್ಸ್‌ವೆಲ್, ನಾಯಕ ಡುಪ್ಲೆಸಿಸ್ ಸ್ಫೋಟಕ ಅರ್ಧಶತಕದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಪಂದ್ಯವನ್ನು ಹೋರಾಡಿ ಸೋಲು ಕಂಡಿದೆ.
ಗೆಲ್ಲಲು 227 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡರೂ ಮ್ಯಾಕ್ಸ್ ವೆಲ್ (Maxwell) ಮತ್ತು ಡುಪ್ಲೆಸಿಸ್ (F du Plessis) ಆಟದಿಂದಾಗಿ ಜಯದತ್ತ ಬಂದಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕಳೆದುಕೊಂಡ ಪರಿಣಾಮ ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಮೊದಲ ಓವರ್ ನಲ್ಲಿ 6 ರನ್ ಗಳಿಸಿದ್ದ ಕೊಹ್ಲಿ (Kohli) ಫೆವಲಿಯನ್ ಹಾದಿ ಹಿಡಿದರು. ಬ್ಯಾಟ್ ಗೆ ಬಡಿದ ಚೆಂಡು ಕಾಲಿಗೆ ಸಿಕ್ಕು ವಿಕೆಟ್ ಗೆ ಬಡಿಯಿತು. ನಂತರ ಬಂದ ಮಹಿಪಾಲ್ ಲೋಮ್ರೋರ್ ಸೊನ್ನೆ ಸುತ್ತಿದರು. 2 ಓವರ್ ಗಳ ಅಂತ್ಯಕ್ಕೆ ಕೇವಲ 15 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್‌ಸಿಬಿಗೆ ನಾಯಕ ಡುಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಜೀವ ತುಂಬಿದರು. ಚೆನ್ನೈ ಬೌಲರ್‌ಗಳನ್ನು ಚೆಂಡಾಡಿದ ಇಬ್ಬರು ಮೂರನೇ ವಿಕೆಟ್ ಗೆ 61 ಎಸೆತಗಳಲ್ಲಿ 126 ರನ್ ಜೊತೆಯಾಟವಾಡಿದರು.
ಮ್ಯಾಕ್ಸ್‌ವೆಲ್ 76 ರನ್ (36 ಎಸೆತ, 3 ಬೌಂಡರಿ, 8 ಸಿಕ್ಸರ್) ಡುಪ್ಲೆಸಿಸ್ 62 ರನ್(33 ಎಸೆತ, 5 ಬೌಂಡರಿ, 4 ಸಿಕ್ಸರ್) ಗಳಿಸಿ, ಔಟ್ ಆದರು. ನಂತರ ಬಂದ ದಿನೇಶ್ ಕಾರ್ತಿಕ್ 28 ರನ್, ಪ್ರಭು ದೇಸಾಯಿ 19 ರನ್ ಸಿಡಿಸಿದರು. ಪರಿಣಾಮ 16.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದ್ದ ಬೆಂಗಳೂರು 27 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲು ಒಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಚೆನ್ನೈ 16 ರನ್ ಗಳಿಸುವಷ್ಟರಲ್ಲೇ ಋತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತ್ತು. ಎರಡನೇ ವಿಕೆಟ್ ಗೆ ಡೆವೊನ್ ಕಾನ್ವೇ ಮತ್ತು ಅಜಿಂಕ್ಯ ರಹಾನೆ 43 ಎಸೆತಗಳಲ್ಲಿ 74 ರನ್ ಜೊತೆಯಾಟವಾಡಿದರು. ರಹಾನೆ 37 ರನ್(20 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. 3ನೇ ವಿಕೆಟಿಗೆ ಕಾನ್ವೇ ಮತ್ತು ಶಿವಂ ದುಬೆ 37 ಎಸೆತಗಳಲ್ಲಿ 80 ರನ್ ಚಚ್ಚಿದರು. ಶಿವಂ ದುಬೆ 52 ರನ್ (27 ಎಸೆತ, 2 ಬೌಂಡರಿ, 5 ಸಿಕ್ಸರ್), ಕಾನ್ವೇ 83 ರನ್(45 ಎಸೆತ, 6 ಬೌಂಡರಿ, 6 ಸಿಕ್ಸರ್) ಹೊಡೆದು ಔಟಾದರು. ಅಂಬಾಟಿ ರಾಯಡು 14 ರನ್, ಮೊಯಿನ್ ಅಲಿ ಔಟಾಗದೇ 19 ರನ್( 9 ಎಸೆತ, 2 ಸಿಕ್ಸರ್) ಹೊಡೆದ ಪರಿಣಾಮ ಚೆನ್ನೈ 6 ವಿಕೆಟ್ ನಷ್ಟಕ್ಕೆ 226 ರನ್ ಸಿಡಿಸಿದರು.








