ಬೆಂಗಳೂರು : ನಗರದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ಸಂಬಂಧ ತನಿಖೆ ಚುರುಕುಗೊಂಡಿದ್ದು, ಇಬ್ಬರು ಕಾಂಗ್ರೆಸ್ ಕಾರ್ಪೋರೇಟರ್ ಗಳಿಗೆ ನೋಟಿಸ್ ನೀಡಿದ್ದಾರೆ. ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಪುಲಕೇಶಿನಗರ ಕಾರ್ಪೋರೇಟರ್ ಅಬ್ದುಲ್ ರಕೀಬ್ ಝಾಕೀರ್ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.
ಗಲಭೆ ಹಿಂದೆ ರಾಜಕೀಯ ದ್ವೇಷದ ಕಾರಣವಿದೆ ಎಂಬ ಕಾರಣಕ್ಕಾಗಿ ಇಬ್ಬರು ಕಾಂಗ್ರೆಸ್ ಪಾಲಿಕೆ ಸದಸ್ಯರನ್ನ ವಿಚಾರಣೆಗೆ ಕರೆಯಲಾಗಿದೆ. ಇದಲ್ಲದೇ ಈಗಾಗಲೇ ಗಲಭೆ ಸಂಬಂಧ ಸಂಪತ್ ರಾಜ್ ಆಪ್ತ ಅರುಣ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರುಣ್ ಬಳಿ ಇದ್ದ ಮೊಬೈಲ್ ನ್ನು ಸಂಪತ್ ರಾಜ್ ಬಳಸುತ್ತಿದ್ದರು ಮತ್ತು ಆ ಮೊಬೈಲ್ ನಲ್ಲಿ ಗಲಭೆಗೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳಿರಬಹುದು ಎಂಬ ಶಂಕೆಯಿಂದ ಪೊಲೀಸರು ಅರುಣ್ ರನ್ನ ವಶಕ್ಕೆ ಪಡೆದಿದ್ದಾರೆ. ಅದರಲ್ಲಿನ ಸಾಕ್ಷ್ಯಗಳನ್ನ ಆಧರಿಸಿ ಕಾರ್ಪೋರೇಟರ್ ಗಳ ವಿಚಾರಣೆ ನಡೆಸಲಿದ್ದಾರೆ.
ಇನ್ನು ಗಲಭೆಗೆ ಸಂಬಂಧ ಮಧ್ಯರಾತ್ರಿ ಮತ್ತೆ 30 ಮಂದಿಯನ್ನು ಡಿಜೆ ಹಳ್ಳಿ ಮತ್ತು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಗಲಭೆಯಲ್ಲಿ ಬಂಧಿತರಾದವರ ಸಂಖ್ಯೆ 380ಕ್ಕೆ ಏರಿಕೆ ಆಗಿದೆ.









