ದೇಶ್ ವಾಸಿಯೋ ಗಮನಿಸಿ : ಬೆಲೆ ಏರಿಕೆ ಖಂಡಿಸಿ ನಾಳೆ ಭಾರತ್ ಬಂದ್
ಬೆಂಗಳೂರು : ಕೊರೊನಾ, ಲಾಕ್ ಡೌನ್ ನಿಂದ ತತ್ತರಿಸಿ ಹೋಗಿರುವ ಜನರಿಗೆ ಬೆಲೆ ಏರಿಕೆ ಗುಮ್ಮ ನಿದ್ದೆ ಕಿತ್ತುಕೊಂಡಿದೆ.
ಪ್ರತಿದಿನ ದಿನಬಳಕೆ ವಸ್ತುಗಳ ದರ ಏರಿಕೆ ಆಗುತ್ತಿರುವುದು ಜನರನ್ನ ಆತಂಕಕ್ಕೆ ಗುರಿ ಮಾಡಿದೆ.
ಕೊರೊನಾ ಕಾಟ, ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಬರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ಯಾರೆ ದೇಶ್ ವಾಸಿಗಳು ಬರ್ಬಾದ್ ಆಗುತ್ತಿದ್ದಾರೆ.
ಒಂದು ಕಡೆ ತೈಲ ಬೆಲೆ ಸೆಂಚೂರಿ ಹೊಡೆಯಲು ತುದಿಗಾಲಿನಲ್ಲಿ ನಿಂತಿದ್ದರೇ, ಇತ್ತ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದಾಗಿ ದಿನ ಬಳಕೆ ವಸ್ತು, ಆಹಾರ ಪದಾರ್ಥಗಳ ಬೆಲೆಗಳು ಆಕಾಶವನ್ನು ಮುಟ್ಟುತ್ತಿವೆ.
ಈ ಹಿನ್ನೆಲೆ ಬೆಲೆ ಏರಿಕೆ, ಸರಕು ಮತ್ತು ಸೇವಾ ತೆರಿಗೆ, ಇ-ಬಿಲ್ ಇತ್ಯಾದಿಗಳನ್ನು ವಿರೋಧಿಸಿ ಶುಕ್ರವಾರ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಭಾರತ್ ಬಂದ್ ಗೆ ಕರೆ ನೀಡಿದೆ.
ಈ ಭಾರತ ಬಂದ್ ಗೆ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ(ಎಐಟಿಡಬ್ಲೂಎ) ಕೂಡ ಬೆಂಬಲ ನೀಡಿದೆ.
ನಾಳೆಯ ಬಂದ್ ನಲ್ಲಿ ಸುಮಾರು 40,000ಕ್ಕೂ ಹೆಚ್ಚು ವ್ಯಾಪಾರಿಗಳ ಸಂಘಗಳು ಭಾಗಿಯಾಗಲಿವೆ. ಇದರಿಂದಾಗಿ ದೇಶಾದ್ಯಂತ ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಮುಚ್ಚಲಾಗುತ್ತದೆ.
ಅಲ್ಲದೆ ಬೆಳಗ್ಗೆ 6ರಿಂದ ರಾತ್ರಿ 8ರವರೆಗೂ ಸಾರಿಗೆ ಸಂಸ್ಥೆಗಳ ಸಂಘ(ಎಐಟಿಡಬ್ಲೂಎ) ಹಾಗೂ ಎಲ್ಲಾ ಸಾರಿಗೆ ಸಂಸ್ಥೆಗಳಿಗೆ ಸಂಚಾರ ಸ್ಥಗಿತಗೊಳಿಸುವುದಾಗಿ ಸೂಚಿಸಲಾಗಿದೆ.
ಬುಕಿಂಗ್ ಹಾಗೂ ಬಿಲ್ ಆಧಾರಿತ ಸರಕುಗಳ ಸಾಗಣೆಗೆ ತಡೆಯೊಡ್ಡಲಾಗಿದೆ. ರಾಷ್ಟ್ರವ್ಯಾಪ್ತಿ 1,500 ಸ್ಥಳಗಳಲ್ಲಿ ಧರಣಿ ನಡೆಸಲಾಗುತ್ತದೆ. ನಾಳೆ ಬರೊಬ್ಬರಿ 40 ಲಕ್ಷ ರಸ್ತೆಗಳು ಬಂದ್ ಆಗಲಿವೆ.
