ಬೆಂಗಳೂರು: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಕಾರು ಚಾಲಕನನ್ನು ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ (Bhavani Revanna) ಕಾರು ಚಾಲಕನನ್ನು ಸದ್ಯ ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಜಿತ್ ಬಂಧಿತ ಕಾರು ಚಾಲಕ. ಶುಕ್ರವಾರ ಸಂಜೆ ಆತನನ್ನು ಚಿಕ್ಕಮಗಳೂರಿನಲ್ಲಿ (Chikkamagaluru) ಬಂಧಿಸಿದ್ದಾರೆ. ಈ ಹಿಂದೆ ಎಸ್ ಐಟಿ ಅಧಿಕಾರಿಗಳು ಅಜಿತ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, ಅಜಿತ್ ಮಾತ್ರ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ವಿಶೇಷ ತನಿಖಾ ತಂಡ (SIT) ಪೊಲೀಸರು ಹೊಳೆನರಸೀಪುರದಲ್ಲಿರುವ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್ ಜಾರಿ ಮಾಡಿದ್ದರು.
ಕೆ.ಆರ್ ನಗರದ ಸಂತ್ರಸ್ತ ಮಹಿಳೆಯನ್ನು ತನ್ನದೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈತ ಆರೋಪಿಯಾಗಿದ್ದ. ಅಲ್ಲದೇ, ರೇವಣ್ಣ ನಿರೀಕ್ಷಣಾ ಜಾಮೀನು ವಿಚಾರಣೆ ದಿನ ಸಂತ್ರಸ್ತ ಮಹಿಳೆಯ ವೀಡಿಯೋ ಚಿತ್ರೀಕರಣ ಮಾಡಿದ್ದು ಇದೇ ಅಜಿತ್ ಎಂಬ ಮಾಹಿತಿ ಕೂಡ ಇತ್ತು. ಹೀಗಾಗಿ ಇತನಿಗಾಗಿ ಹುಡುಕಾಟ ನಡೆಸಲಾಗಿತ್ತು.