ಕರ್ನಾಟಕ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮಹತ್ವದ ಭೇಟಿ ಸಾಕಷ್ಟು ಗಮನ ಸೆಳೆದಿದೆ. ಇಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾಜ್ಯ ರಾಜಕೀಯದಲ್ಲಿ ಮಹತ್ವದ ನಿರ್ಧಾರಗಳು ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.
ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬೆಂಗಳೂರಿಗೆ ಮರಳಿದ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಎಲ್ಲಾ ಕಾಂಗ್ರೆಸ್ ಶಾಸಕರಿಗೂ ತಕ್ಷಣ ಬೆಂಗಳೂರಿಗೆ ಆಗಮಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ, ದೆಹಲಿಯ ಐಟಿಸಿ ಮೌರ್ಯ ಹೋಟೆಲ್ಗೆ ಡಿಕೆ ಶಿವಕುಮಾರ್ ಭೇಟಿ ನೀಡಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಇಬ್ಬರೂ ಒಟ್ಟಿಗೆ ಊಟ ಮಾಡುತ್ತಾ ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳು, ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ರಚನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ರಾಜ್ಯದಲ್ಲಿ ಮುಂದಿನ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇಂದಿನ ಶಾಸಕಾಂಗ ಸಭೆ ಬಳಿಕ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ.








