ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ಬಾರಮ್ಮ’ ಮೂಲಕ ಮನೆಮಾತಾಗಿರುವ ನಟಿ ತನ್ವಿ ರಾವ್ ಈಗ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಭರ್ಜರಿ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನ ‘ರಾಧೇಶ್ಯಾಮ’ ಧಾರಾವಾಹಿ ಸೇರಿದಂತೆ ಬಾಲಿವುಡ್ನ ‘ಗುಲಾಬ್ ಗ್ಯಾಂಗ್’, ‘ಗುಲ್ಮೊಹರ್’ ಹಾಗೂ ‘ಗನ್ಸ್ ಆಫ್ ಬನಾರಸ್’ ಸಿನಿಮಾಗಳಲ್ಲಿ ಈಗಾಗಲೇ ತಮ್ಮ ನಟನಾ ಛಾಪು ಮೂಡಿಸಿರುವ ಇವರು, ನೃತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡು ದೇಶ-ವಿದೇಶಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಬಹುತೇಕ ಕಲಾವಿದರು ಪ್ರಾದೇಶಿಕ ಚಿತ್ರರಂಗದಿಂದ ಬಾಲಿವುಡ್ಗೆ ಕಾಲಿಟ್ಟರೆ, ತನ್ವಿ ರಾವ್ ಶಾಲಾ ದಿನಗಳಲ್ಲೇ ಬಾಲಿವುಡ್ ಪ್ರವೇಶಿಸಿ, ಬಳಿಕ ಕನ್ನಡ ಕಿರುತೆರೆಯಲ್ಲಿ ಮಿಂಚಿ ಈಗ ನಾಯಕಿಯಾಗಿ ಹಿರಿತೆರೆಗೆ ಬಡ್ತಿ ಪಡೆದಿರುವುದು ವಿಶೇಷ.
ಪ್ರತಿಭಾವಂತ ನಟ ಹಾಗೂ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಚೊಚ್ಚಲ ಬಾರಿಗೆ ನಿರ್ದೇಶಕರ ಕ್ಯಾಪ್ ಧರಿಸಿರುವ ‘ಭಾವಾಂತರ’ ಚಿತ್ರದ ಮೂಲಕ ತನ್ವಿ ರಾವ್ ನಾಯಕಿಯಾಗಿ ಸ್ಯಾಂಡಲ್ವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದ ಆಯ್ಕೆ ಕುರಿತು ಮಾತನಾಡಿರುವ ನಟಿ, “ಕಾರ್ತಿಕ್ ಶರ್ಮಾ ಅವರು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನನ್ನ ನಟನೆ ನೋಡಿ ಗುರುತಿಸಿದ್ದರು. ನಂತರ ನನ್ನನ್ನು ಸಂಪರ್ಕಿಸಿ ಕಥೆ ವಿವರಿಸಿದರು. ಇಂತಹ ವಿಶಿಷ್ಟ ಹಾಗೂ ಆಳವಾದ ಕಥೆಯನ್ನು ನಾನು ಈ ಹಿಂದೆ ಎಂದೂ ಕೇಳಿರಲಿಲ್ಲ. ಹಾಗಾಗಿ ಕಥೆ ಕೇಳಿದ ತಕ್ಷಣವೇ ಒಪ್ಪಿಕೊಂಡೆ. ಸ್ವಲ್ಪ ಸಮಯ ತೆಗೆದುಕೊಂಡು ಕಥೆ ಮತ್ತು ಪಾತ್ರದ ಸ್ವರೂಪದ ಕುರಿತು ಸಾಕಷ್ಟು ಚರ್ಚೆಗಳನ್ನು ನಡೆಸಿದೆವು. ಮೊದಲ ಹೆಜ್ಜೆಯಲ್ಲೇ ನನಗೆ ಹೇಳಿಮಾಡಿಸಿದಂತಹ ಅದ್ಭುತ ಕಥೆ ಮತ್ತು ಮಹತ್ವಾಕಾಂಕ್ಷೆಯ ಪಾತ್ರ ಸಿಕ್ಕಿರುವುದು ಅಪಾರ ಖುಷಿ ತಂದಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಚಿತ್ರದಲ್ಲಿ ತನ್ವಿ ರಾವ್ ‘ರಾಧಾ’ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಕುರಿತು ಬೆಳಕು ಚೆಲ್ಲಿದ ಅವರು, “ಚಿತ್ರದಲ್ಲಿ ನನ್ನ ಪಾತ್ರ ರಾಧಾ ಒಬ್ಬ ಮಹತ್ವಾಕಾಂಕ್ಷೆಯ, ಎಲ್ಲದರಲ್ಲೂ ಪರಿಪೂರ್ಣತೆ ಬಯಸುವ ಅಪ್ಪಟ ಡಾಕ್ಯುಮೆಂಟರಿ ಫಿಲ್ಮ್ ಮೇಕರ್. ವೃತ್ತಿ ಬದುಕಿನ ಬಗ್ಗೆ ಅಪಾರ ಬದ್ಧತೆ, ಪ್ರೀತಿ ಹೊಂದಿರುವ ಆಕೆ, ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸದಾ ಪ್ರತ್ಯೇಕವಾಗಿ ಇಡಲು ಬಯಸುವ ಸ್ವಭಾವದವಳು. ಹೊಸ ಕಥೆಗಳನ್ನು ಹುಡುಕುವುದು, ಕಟ್ಟುವುದು ಆಕೆಗೆ ಅಚ್ಚುಮೆಚ್ಚು. ಅಂತಹ ಆಕೆಯ ಬದುಕಿನಲ್ಲಿ ಏನೋ ಒಂದು ಅನಿರೀಕ್ಷಿತ ಘಟನೆ ನಡೆದುಹೋಗುತ್ತದೆ; ಅದರ ಹಿಂದಿನ ಮತ್ತು ಮುಂದಿನ ಮಹತ್ವದ ವಿದ್ಯಮಾನಗಳ ಸುತ್ತವೇ ‘ಭಾವಾಂತರ’ ಚಿತ್ರದ ಕಥಾಹಂದರ ಸಾಗುತ್ತದೆ” ಎಂದು ಪಾತ್ರದ ಗಂಭೀರತೆಯನ್ನು ಬಿಚ್ಚಿಟ್ಟಿದ್ದಾರೆ.
ಚಿತ್ರೀಕರಣಕ್ಕೂ ಮುನ್ನ ನಡೆದ ಸಿದ್ಧತೆಗಳ ಕುರಿತು ಮಾತನಾಡಿದ ತನ್ವಿ, “ಚಿತ್ರೀಕರಣ ಆರಂಭಕ್ಕೂ ಮುನ್ನ ಹಲವು ದಿನಗಳ ಕಾಲ ನಟನೆ ಮತ್ತು ಪಾತ್ರದ ವರ್ಕ್ಶಾಪ್ ನಡೆಸಿದೆವು. ನಿರ್ದೇಶಕ ಕಾರ್ತಿಕ್ ಶರ್ಮಾ ಅವರು ನಮ್ಮಿಂದ ಅತ್ಯುತ್ತಮ ಅಭಿನಯವನ್ನು ಹೊರತೆಗೆಯಲು ಅಗತ್ಯ ತರಬೇತಿ ನೀಡಿದರು. ಪಾತ್ರದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಆಳವಾದ ಅಧ್ಯಯನ ನಡೆಸಲಾಯಿತು. ಪ್ರತಿಯೊಂದು ದೃಶ್ಯ ಹಾಗೂ ಸಂಭಾಷಣೆಯ ಬಗ್ಗೆ ಸಾಕಷ್ಟು ಚರ್ಚಿಸಿ ಕೆಲಸ ಮಾಡಿದ್ದೇವೆ. ಕಾರ್ತಿಕ್ ಕೆಲಸದಲ್ಲಿ ಎಷ್ಟೇ ಶಿಸ್ತಿನಿಂದ ತೊಡಗಿಸಿಕೊಂಡಿದ್ದರೂ, ಸೆಟ್ನಲ್ಲಿ ಸದಾ ಕೂಲ್ ಆಗಿರುತ್ತಾರೆ. ನಿರ್ದಿಷ್ಟ ಚೌಕಟ್ಟಿಗೆ ಕಲಾವಿದರನ್ನು ಕಟ್ಟಿಹಾಕದೆ, ಅವರೊಳಗಿನ ಪ್ರತಿಭೆ ಸಹಜವಾಗಿ ಹೊರಬರಲು ಸ್ವಾತಂತ್ರ್ಯ ನೀಡುತ್ತಾರೆ. ಅವರೊಂದಿಗೆ ಕೆಲಸ ಮಾಡಿದ್ದು ಅತ್ಯಂತ ಸಂತಸದ ಅನುಭವ. ನಾವು ತುಂಬಾ ರಿಯಲ್ ಲೊಕೇಷನ್ಗಳಲ್ಲಿ ನಮ್ಮ ಸಿನಿಮಾವನ್ನು ಶೂಟ್ ಮಾಡಿದ್ದೇವೆ” ಎಂದು ಶ್ಲಾಘಿಸಿದ್ದಾರೆ. ʻಭಾವಾಂತರʼ ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲಿದೆ.







