ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಚಿತ್ರತಂಡಕ್ಕೆ ನಟಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಸಾಥ್ ನೀಡಿದ್ದಾರೆ. ಚಿತ್ರದ ಯಶಸ್ಸಿಗೆ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುವ ಅವರು, ಚಿತ್ರದ ಕಥೆ ಹಾಗೂ ನಿರೂಪಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ಕುರಿತು ಮಾತನಾಡಿರುವ ರಚಿತಾ ರಾಮ್, “ಮೊದಲನೆಯದಾಗಿ ‘ಪ್ರೇಮದ ಊರಲಿ’ ಸಿನಿಮಾ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು. ಒಂದು ಅದ್ಭುತವಾದ ಮತ್ತು ಸುಂದರವಾದ ಪ್ರೇಮಕಥೆಯನ್ನು ಕನ್ನಡಿಗರಿಗೆ ತಲುಪಿಸಿ, ಪ್ರತಿಯೊಬ್ಬರ ಮನಸ್ಸು ಗೆಲ್ಲುವಲ್ಲಿ ನೀವು ಯಶಸ್ವಿಯಾಗಿದ್ದೀರಿ” ಎಂದು ಚಿತ್ರತಂಡದ ಪ್ರಯತ್ನವನ್ನು ಕೊಂಡಾಡಿದ್ದಾರೆ.
ಚಿತ್ರದಲ್ಲಿ ನಟಿಸಿರುವ ಕಲಾವಿದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ನಟಿ, “ನನ್ನ ನೆಚ್ಚಿನ ನಟ ರಂಗಾಯಣ ರಘು ಸರ್, ನಾಯಕ ಶ್ರೀರಾಮ್, ತಪಸ್ವಿನಿ, ರಮಿಕಾ, ಇಳಾ ವಿಟ್ಲ ಸೇರಿದಂತೆ ಇಡೀ ತಾರಾಗಣ ಅತ್ಯುತ್ತಮವಾಗಿ ನಟಿಸಿದೆ. ಸಿನಿಮಾಗೆ ಎಲ್ಲಾ ಕಡೆಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಒಂದು ಸಿನಿಮಾದಲ್ಲಿ ಉತ್ತಮ ಕಂಟೆಂಟ್, ಗಟ್ಟಿಯಾದ ಕಥೆ ಮತ್ತು ಸ್ಕ್ರೀನ್ಪ್ಲೇ ಇದ್ದು ಅದು ಜನರ ಹೃದಯ ಮುಟ್ಟಿದರೆ ಖಂಡಿತವಾಗಿಯೂ ದೊಡ್ಡ ಮಟ್ಟದ ಗೆಲುವು ಸಿಗುತ್ತದೆ ಎಂಬುದನ್ನು ನಾವು ಮೊದಲಿನಿಂದಲೂ ನೋಡುತ್ತಾ ಬಂದಿದ್ದೇವೆ. ಈ ಚಿತ್ರಕ್ಕೂ ಅದೇ ರೀತಿ ಮೆಚ್ಚುಗೆ ಸಿಗುತ್ತಿರುವುದು ಖುಷಿ ತಂದಿದೆ” ಎಂದಿದ್ದಾರೆ.
ತಾವೆಲ್ಲರೂ ಒಂದೇ ಚಿತ್ರರಂಗದವರಾಗಿದ್ದು, ಇಂತಹ ಗುಣಮಟ್ಟದ ಸಿನಿಮಾವೊಂದು ಪ್ರೇಕ್ಷಕರ ಮನಗೆದ್ದಿರುವುದಕ್ಕೆ ಇಡೀ ಚಿತ್ರರಂಗವೇ ಹೆಮ್ಮೆಪಡುವಂತಾಗಿದೆ ಎಂದು ಅಭಿಪ್ರಾಯಪಟ್ಟ ರಚಿತಾ ರಾಮ್, ಚಿತ್ರದ ನಿರ್ಮಾಪಕರು, ಸಂಗೀತ ನಿರ್ದೇಶಕರು, ಗೀತರಚನೆಕಾರರು ಸೇರಿದಂತೆ ತೆರೆಯ ಹಿಂದೆ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞರಿಗೂ ಶುಭ ಕೋರಿದ್ದಾರೆ. ಜೊತೆಗೆ, ಮುಂದೆಯೂ ಇಂತಹ ಅರ್ಥಪೂರ್ಣ ಕಥೆಗಳುಳ್ಳ ಸಿನಿಮಾಗಳು ಇದೇ ತಂಡದಿಂದ ಮೂಡಿಬರಲಿ ಎಂದು ಹಾರೈಸಿದ್ದಾರೆ.








