ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಸಂಸ್ಥೆಯ ಆಡಳಿತ ಮಂಡಳಿಯಿಂದ ಹೊರನಡೆದು ಅಚ್ಚರಿ ಮೂಡಿಸಿದ್ದಾರೆ
ಈ ವಿಚಾರವನ್ನು ಬಿಲ್ ಗೇಟ್ಸ್ ಧೃಡಪಡಿಸಿದ್ದು ಹಾಥ್ ವೇ ಕಂಪೆನಿಯ ಆಡಳಿತ ಮಂಡಳಿಯಿಂದಲೂ ಕೆಳಗಿಳಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೈಕ್ರೋಸಾಫ್ಟ್ ಮತ್ತು ಬರ್ಕ್ ಶೈರ್ ಹಾಥ್ ವೇ ಕಂಪೆನಿಗಳ ಆಡಳಿತ ಮಂಡಳಿಗಳಿಂದ ನಿವೃತ್ತನಾಗುವ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಉಳಿದ ಬದುಕಿನ ಸಮಯವನ್ನು ಸಮಾಜ ಸೇವೆ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿ ಕೊಳ್ಳಲು ಕಂಪನಿಯ ಮಂಡಳಿಯಿಂದ ಕೆಳಗಿಳಿಯುತ್ತಿದ್ದೇನೆ. ಅದೇ ರೀತಿ, ನನ್ನ ಹೆಚ್ಚಿನ ಸಮಯ ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿ, ಶಿಕ್ಷಣ ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸುವತ್ತ ಗಮನಹರಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಕಂಪೆನಿ ಆಡಳಿತ ಮಂಡಳಿಯಿಂದ ದೂರ ಇದ್ದೇನೆ ಎಂದ ಮಾತ್ರಕ್ಕೆ ಕಂಪೆನಿಯಿಂದಲೇ ದೂರ ಹೋಗುವುದಿಲ್ಲ. ಮೈಕ್ರೋಸಾಫ್ಟ್ ಯಾವತ್ತಿದ್ದರೂ ನನ್ನ ಬದುಕಿನ ವೃತ್ತಿಯ ಒಂದು ಮಹತ್ವದ ಭಾಗ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹಾಗೂ ಕಂಪನಿಯ ತಾಂತ್ರಿಕ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಸಂಸ್ಥೆಯ ಮಹತ್ವಾಕಾಂಕ್ಷೆಯನ್ನು ತಲುಪಲು ಬೇಕಾದ ಮಾರ್ಗವನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಮೈಕ್ರೋಸಾಫ್ಟ್ ಎಂಬ ಸಾಫ್ಟ್‌ವೇರ್ ಕಂಪೆನಿಯ ಸಂಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ಅತಿದೊಡ್ಡ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತನ್ನ ಬಾಲ್ಯದ ಗೆಳೆಯ 2018ರಲ್ಲಿ ನಿಧನ ಹೊಂದಿದ ಪಾಲ್ ಅಲೆನ್ ಜೊತೆ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಎಂಬ ಕಂಪೆನಿಯನ್ನು 1975 ರಲ್ಲಿ ಸ್ಥಾಪಿಸಿದರು. 1980 ರಲ್ಲಿ ಮೈಕ್ರೋಸಾಫ್ಟ್ , ಐಬಿಎಂನೊಂದಿಗೆ ಎಂಎಸ್-ಡಾಸ್ ಎಂಬ ಆಪರೇಟಿಂಗ್ ಸಿಸ್ಟಮ್ ಅನ್ನು ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಐಟಿ ಉದ್ಯಮದ ದೈತ್ಯ ಸಂಸ್ಥೆಯಾಗಿ ಬೆಳೆಯಿತು ಮತ್ತು ಒಂದು ವರ್ಷದೊಳಗೆ ಬಿಲ್ ಗೇಟ್ಸ್ ತಮ್ಮ 31 ನೇ ವಯಸ್ಸಿಗೆ ಬಿಲಿಯನೇರ್ ಆದರು.
ಬಿಲ್ ಗೇಟ್ಸ್ 2014ರಲ್ಲೇ ಮೈಕ್ರೋಸಾಫ್ಟ್ ಸಂಸ್ಥೆಯ ನಿರ್ದೇಶಕರ ಮಂಡಳಿ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸದಸ್ಯತ್ವ ಸ್ಥಾನದಿಂದಲೂ ಕೆಳಗಿಳಿದಿದ್ದು, ಸಂಪೂರ್ಣವಾಗಿ ಮೈಕ್ರೋಸಾಫ್ಟ್ ಸಂಸ್ಥೆಯಿಂದ ಹೊರನಡೆಯುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಸತ್ಯ ನಾದೆಲ್ಲಾ ಇಷ್ಟು ವರ್ಷಗಳಲ್ಲಿ ಬಿಲ್ ಗೇಟ್ಸ್ ಅವರೊಂದಿಗೆ ಕೆಲಸ ಮಾಡಿದ ಮತ್ತು ಕಲಿತಿದ್ದು ಅಪಾರ ಗೌರವ ಮತ್ತು ಸವಲತ್ತು ನೀಡಿದೆ ಎಂದು ತಿಳಿಸಿದ್ದಾರೆ.
ಬಿಲ್ ಗೇಟ್ಸ್ 2015ರ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ 2020ರ ಆರಂಭದಲ್ಲಿ ಇಡೀ ವಿಶ್ವ ಹೊಸ ರೀತಿಯ ವೈರಾಣು ಸೋಂಕಿನಿಂದ ತೀವ್ರ ಬಾಧೆಗೆ ಒಳಗಾಗಲಿದೆ. ಇದನ್ನು ಸಮರ್ಥವಾಗಿ ಎದುರಿಸಲು ವಿಶ್ವ ಸಾಕಷ್ಟು ಸಿದ್ಧವಾಗಿರುವುದಿಲ್ಲ ಎಂದು ಎಚ್ಚರಿಸಿದರು. ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಬೇಗನೆ ಸೋಂಕು ತರುತ್ತದೆ. 10 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಜನರನ್ನು ಕೊಲ್ಲುವ ಸಾಂಕ್ರಾಮಿಕ ರೋಗವದು ಎಂದು ಪಶ್ಚಿಮ ಆಫ್ರಿಕಾದಲ್ಲಿ ಎಬೊಲಾ ವೈರಸ್ ಕಾಣಿಸಿಕೊಂಡ ಸಮಯದಲ್ಲಿ ಹೇಳಿದ್ದ ಅವರು ಸಾಂಕ್ರಾಮಿಕ ರೋಗಗಳಿಗೆ ಜಾಗತಿಕ ಎಚ್ಚರಿಕೆ ಮತ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಏಕಾಏಕಿ ತಡೆಯಬಹುದು ಎಂದು ಪ್ರತಿಪಾದಿಸಿದ್ದರು.