ತೆರೆಮೇಲೆ ಬರುತ್ತಿದೆ ಸೌರವ್ ಗಂಗೂಲಿ ಬಯೋಪಿಕ್ : ದಾದಾ ಪಾತ್ರದಲ್ಲಿ ನಟಿಸಲಿರುವ ಆ ಸ್ಟಾರ್ ನಟ ಯಾರು ಗೊತ್ತಾ..?
ಟೀಂ ಇಂಡಿಯಾದ ಮಾಜಿ ನಾಯಕ, ದಾದಾ ಸೌರವ್ ಗಂಗೂಲಿ ಅವರ ಜೀವನಚರಿತ್ರೆ ತೆರೆಮೇಲೆ ಬರಲು ಸಜ್ಜಾಗುತ್ತಿದೆ. ತನ್ನ ಜೀವನವನ್ನು ಸಿನಿಮಾ ಮಾಡಲು ದಾದಾ ಗಂಗೂಲಿ ಅನುಮತಿ ನೀಡಿದ್ದಾರೆ. ಅಲ್ಲದೇ ತಮ್ಮ ಪಾತ್ರಕ್ಕೆ ನಟನನ್ನೂ ಶಿಪಾರಸ್ಸು ಮಾಡಿದ್ದಾರೆ.. ಹಾಗಾದ್ರೆ ದಾದಾ ಪಾತ್ರಕ್ಕೆ ಜೀವ ತುಂಬಲಿರುವ ಆ ನಟ ಯಾರು…?
ತನ್ನ ಪಾತ್ರದಲ್ಲಿ ರಣ್ಬೀರ್ ಕಪೂರ್ ನಟಿಸಲಿ ಎಂದು ದಾದಾ ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಗಂಗೂಲಿ ಬಾಲ್ಯ, ಜೀವನ, ಕ್ರಿಕೆಟ್ ಮತ್ತು ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಜೀವನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆ ಈ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಇನ್ನೂ ಈಗಾಗಲೇ ಸಾಕಷ್ಟು ಕ್ರಿಕೆಟ್ ಆಟಗಾರರ ಜೀವನಚರಿತ್ರೆ ತೆರೆಮೇಲೆ ಬಂದಿದೆ. ಇನ್ನೂ ಹಲವು ಚಿತ್ರಗಳು ಬರಬೇಕಿದೆ.. ಮಾಜಿ ಟೀಂ ಇಂಡಿಯಾ ನಾಯಕ ಎಂ.ಎಸ್ ಧೋನಿ, ಮೊಹಮ್ಮದ್ ಅಜರುದ್ದೀನ್ ಬಯೋಪಿಕ್ ತೆರೆಗೆ ಬಂದಿವೆ. ಸುಶಾಂತ್ ಸಿಂಗ್ ನಟನೆಯ ಎಂ ಎಸ್ ಧೋನಿ ಬಯೋಪಿಕ್ ಸೂಪರ್ ಸಕ್ಸಸ್ ಕಂಡಿತ್ತು. ಮೊಹಮ್ಮದ್ ಅಜರುದ್ದೀನ್ ಬಯೋಪಿಕ್ ನಲ್ಲಿ ಇಮ್ರಾನ್ ಹಶ್ಮಿ ಕಾಣಿಸಿಕೊಂಡಿದ್ದರು. ಇನ್ನು ಮಿಥಾಲಿ ರಾಜ್ ಆಗಿ ನಟಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ.
ಇತ್ತೀಚೆಗೆ ಸುರೇಶ್ ರೈನಾ ಬಯೋಪಿಕ್ ಸುದ್ದಿಯಲ್ಲಿತ್ತು. ಅಲ್ಲದೆ ತನ್ನ ಬಯೋಪಿಕ್ ನಲ್ಲಿ ಸೌತ್ ಸ್ಟಾರ್ ಸೂರ್ಯ ಅಥವಾ ದುಲ್ಕರ್ ಸಲ್ಮಾನ್ ನಟಿಸಬೇಕೆಂದು ಸುರೇಶ್ ರೈನಾ ಬಹಿರಂಗವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಈಗ ಗಂಗೂಲಿ ಬಯೋಪಿಕ್ ಸುದ್ದಿ ಮಾಡುತ್ತಿದೆ. ಮೂಲಗಳ ಪ್ರಕಾರ ಗಂಗೂಲಿ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ರಣ್ಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.








