ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣಾ ಕಾವು ಜೋರಾಗಿದ್ದು, ಮೈತ್ರಿಯ ಅಬ್ಬರ ಕೂಡ ಜೋರಾಗಿದೆ. ಬಿಜೆಪಿ ಕೂಡ ಹಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಒಡಿಶಾದಲ್ಲೂ ಬಿಜೆಡಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ.
15 ವರ್ಷದ ಬಳಿಕ ಬಿಜೆಡಿ ಮರಳಿ ಎನ್‌ಡಿಎ ಮೈತ್ರಿಕೂಟ ಸೇರಲು ಮುಂದಾದಂತಾಗಿದೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಬಿಜೆಡಿ ನಾಯಕರು ಸಿಎಂ ನವೀನ್ ಪಟ್ನಾಯಕ್ ಬಿರುಸಿನ ಚರ್ಚೆ ನಡೆಸಿದ್ದು, ಸದ್ಯದಲ್ಲಿಯೇ ಅಂತಿಮ ವಿಷಯ ಹೊರ ಬೀಳುವ ಸಾಧ್ಯತೆ ಇದೆ.
ಈ ಎರಡೂ ಪಕ್ಷಗಳು 1998 ರಿಂದ 2009ರ ವರೆಗೆ ಮಿತ್ರ ಪಕ್ಷಗಳಾಗಿದ್ದವು. ಸಿಎಂ ಆಗುವುದಕ್ಕೂ ಮುನ್ನ ನವೀನ್ ಪಟ್ನಾಯಕ್ ಅವರು 1990 ರ ದಶಕದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದರು.
ಆದರೆ, ಕಂಧಮಾಲ್ ಗಲಭೆಯ ನಂತರ ಎನ್ ಡಿಎದಿಂದ ದೂರವಾಗಿದ್ದರು. ಮಹತ್ವದ ಮಸೂದೆಗಳು ಮಂಡನೆಯಾದ ಸಂದರ್ಭದಲ್ಲಿ ಬಿಜೆಡಿ ಮೋದಿ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಸದ್ಯದ ಮಾಹಿತಿಯಂತೆ ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ 14 ಕ್ಷೇತ್ರಗಳನ್ನು ಬಿಜೆಪಿ ಕೇಳುತ್ತಿದೆ ಎನ್ನಲಾಗುತ್ತಿದ್ದು, ಬಿಜೆಪಿಗೆ 11, ಬಿಜೆಡಿಗೆ 9 ಕ್ಷೇತ್ರ ಸಿಗಬಹುದು ಎಂಬ ಚರ್ಚೆಯಾಗುತ್ತಿದೆ. ಸದ್ಯ ಬಿಜೆಪಿ 8, ಬಿಜೆಡಿ 12, ಕಾಂಗ್ರೆಸ್ 1 ಸ್ಥಾನ ಗಳಿಸಿದೆ. ಆದರೆ, 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಡಿ ಭರ್ಜರಿ ಜಯ ಸಾಧಿಸಿದ್ದು, ಜನಪರ ಅಲೆಯಲ್ಲಿ ತೇಲಾಡುತ್ತಿದೆ.








