ಹೊಸದಿಲ್ಲಿ: ಗಾಂಧಿ ಮತ್ತು ವಾದ್ರಾ ಕುಟುಂಬದ ವಿರುದ್ಧ ಬಿಜೆಪಿ ಈಗ ಭೂ ಕಬಳಿಕೆಯ ಗಂಭೀರ ಆರೋಪವನ್ನು ಹೊರಿಸುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಬಾಂಬ್ ಸಿಡಿಸಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಕುಟುಂಬವು ಉತ್ತರಾಖಂಡದಲ್ಲಿ 90 ವರ್ಷದ ವೃದ್ಧೆಯೊಬ್ಬರ ಬೆಲೆಬಾಳುವ ಜಮೀನನ್ನು ಕಾನೂನುಬಾಹಿರವಾಗಿ ಕಬಳಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ರಾಜಕೀಯವಲ್ಲ, ಭೂಮಿ ಕಬಳಿಸುವುದೇ ಇವರ ಉದ್ಯೋಗ
ಉತ್ತರಾಖಂಡ ಮತ್ತು ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಗಾಂಧಿ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜಕೀಯ ಮಾಡುವುದು ಗಾಂಧಿ ಮತ್ತು ವಾದ್ರಾ ಕುಟುಂಬದ ಉದ್ದೇಶವಲ್ಲ, ಜನರ ಆಸ್ತಿಯನ್ನು ಲೂಟಿ ಮಾಡುವುದೇ ಇವರ ಅಸಲಿ ವ್ಯವಹಾರವಾಗಿದೆ ಎಂದು ಟೀಕಿಸಿದರು. ಇಷ್ಟು ದಿನ ರಾಜಕೀಯ ಅಧಿಕಾರ ಬಳಸುತ್ತಿದ್ದವರು ಈಗ 90 ವರ್ಷದ ಅಜ್ಜಿಯನ್ನೂ ಬಿಡದೆ ಕಾಡುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
4 ಎಕರೆ ಬೆಲೆಬಾಳುವ ಜಮೀನಿನ ಮೇಲೆ ವಾದ್ರಾ ಹಸ್ತ
ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಿಚ್ಚಾ ಎಂಬಲ್ಲಿರುವ 4 ಎಕರೆ ಜಮೀನಿನ ಕುರಿತು ಈ ವಿವಾದ ಎದ್ದಿದೆ. ಈ ಆಸ್ತಿಯು ಮೂಲತಃ ದಿವಂಗತ ಕುಲ್ಲುಮ್ ಖಾನ್ ಎಂಬುವವರ ಹೆಸರಿನಲ್ಲಿದ್ದು, ಈಗ ಅವರ 90 ವರ್ಷದ ಸಹೋದರಿ ನಸೀನ್ ಖಾನ್ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಆದರೆ ರಾಬರ್ಟ್ ವಾದ್ರಾ ಅವರ ಸಹೋದರಿ ಸಾಯಿರಾ ವಾದ್ರಾ ಈ ಜಮೀನನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂಬುದು ಬಿಜೆಪಿಯ ಆರೋಪ.
ಸಾಯಿರಾ ವಾದ್ರಾ ಅವರು ಕಾನೂನಾತ್ಮಕವಾಗಿ ಈ ಜಮೀನನ್ನು ಪಡೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಈಗ ರಾಜಕೀಯ ಪ್ರಭಾವ ಬಳಸಿ ಅಜ್ಜಿಗೆ ಬೆದರಿಕೆ ಹಾಕಿ, ದರ್ಪದಿಂದ ಭೂಮಿಯನ್ನು ಕಬಳಿಸಲು ಹೊರಟಿದ್ದಾರೆ ಎಂದು ಪ್ರದೀಪ್ ಭಂಡಾರಿ ವಿವರಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಮತ್ತು ಅವರ ಪತಿ ಇದರ ಹಿಂದೆ ಇದ್ದು, ಅಧಿಕಾರದ ಬಲ ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ದೂರಿದೆ. ಕೇವಲ 90 ವರ್ಷದ ಹಿರಿಯ ಜೀವದ ಆಸ್ತಿಯ ಮೇಲೆ ಕಣ್ಣಿಟ್ಟಿರುವುದು ಇವರ ನೈತಿಕತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ ನ ಉನ್ನತ ನಾಯಕರ ಮೇಲೆ ಬಂದಿರುವ ಈ ಗಂಭೀರ ಆರೋಪವು ಉತ್ತರಾಖಂಡ ಮತ್ತು ಕೇಂದ್ರ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ಮತ್ತೊಂದು ಹಂತದ ಸಮರಕ್ಕೆ ಮುಂದಾಗಿದೆ. ಅಜ್ಜಿಯ ಆಸ್ತಿ ರಕ್ಷಣೆಗಾಗಿ ಬಿಜೆಪಿ ಕಾನೂನು ಹೋರಾಟಕ್ಕೂ ಸಿದ್ಧ ಎನ್ನುವ ಸಂದೇಶ ರವಾನಿಸಿದೆ.








