ಬಿಜೆಪಿಯ ವಿರುದ್ಧ ಶೇ. 40 ಕಮೀಷನ್ ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸದ್ಯ ಅದೇ ಕಮಿಷನ್ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಗುತ್ತಿಗೆದಾರರಿಂದ ಬಿಜೆಪಿ ನಾಯಕರು ಹಾಗೂ ಸರ್ಕಾರ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದಿಂದ ಪ್ರಧಾನಿ ಅವರಿಗೆ ದೂರು ಕೂಡ ನೀಡಲಾಗಿತ್ತು.
ಸದ್ಯ ಕಾಂಗ್ರೆಸ್ ಸರ್ಕಾರದ ಮೇಲೆ ರಾಜ್ಯಪಾಲರಿಗೆ ದೂರು ನೀಡುವ ಹಂತಕ್ಕೆ ಬಂದಿದೆ. ಈಗ ಗುತ್ತಿಗೆದಾರರ ಟಾರ್ಗೆಟ್ ಡಿಸಿಎಂ ಡಿ.ಕೆ. ಶಿವಕುಮಾರ್ ಆಗಿದ್ದಾರೆ. ಗುತ್ತಿಗೆದಾರರ ಬೆಂಬಲಕ್ಕೆ ಬಿಜೆಪಿಯೂ ನಿಂತಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ರದ್ದು ಮಾಡಿ ಮರು ತನಿಖೆಗೆ ಆದೇಶ ನೀಡಿದ್ದಾರೆ. ಇದು ಗುತ್ತಿಗೆದಾರರನ್ನು ಕೆರಳಿಸಿದೆ. ಈಗಾಗಲೆ ಸಾಕಷ್ಟು ಕಾಮಗಾರಿಗಳನ್ನು ನಡೆಸಿದವರು ಕಳೆದ ನಾಲ್ಕು ತಿಂಗಳಿನಿಂದ ಬಿಲ್ ಸಿಗದೆ ಸಂಕಷ್ಟದಲ್ಲಿದ್ದಾರೆ. ಈಗ ತನಿಖೆ ಹೆಸರಿನಲ್ಲಿ ಮತ್ತೆ ಹಣ ಪಾವತಿಗೆ ತಡೆ ಒಡ್ಡುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅದಕ್ಕಿಂತಲೂ ಗಂಭೀರವಾದ ಆರೋಪ ಎಂದರೆ ಡಿ.ಕೆ. ಶಿವಕುಮಾರ್ ಅವರು ಗುತ್ತಿಗೆದಾರರಿಂದ ಶೇ. 15 ಕಮಿಷನ್ ಕೇಳಿದ್ದಾರೆ ಎಂಬುವುದು.
ಡಿಕೆ ಶಿವಕುಮಾರ್ ಅವರು ಬಿಲ್ ಪಾವತಿಗೆ ಶೇ. 15 ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಡಿ.ಕೆ. ಶಿವಕುಮಾರ್ ನೇರವಾಗಿ ಕಮಿಷನ್ ಕೇಳುತ್ತಿರುವ ವಿಡಿಯೋವೊಂದು ಗುತ್ತಿಗೆದಾರರ ನಡುವೆ ಓಡಾಡಿ ಸದ್ಯ ಬಿಜೆಪಿಯ ಕೈಗೆ ಸೇರಿದೆ ಎನ್ನಲಾಗಿದೆ.








