ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳಾಗಿ ಮುಂದುವರಿಸೋದು, ಇಳಿಸೋದು ಅವರ ಪಕ್ಷಕ್ಕೆ ಬಿಟ್ಟ ವಿಚಾರ, ಅವರನ್ನು ಮುಂದುವರಿಸಿದ್ರೂ, ಕೆಳಗಿಳಿಸಿದ್ರೂ ಲಾಭವೇ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇರುವಷ್ಟು ದಿನ ನಮಗೇ ಲಾಭ. 6 ತಿಂಗಳು ಮಾತ್ರ ಯಡಿಯೂರಪ್ಪಗೆ ಅಧಿಕಾರ ಎಂದು ಅವರ ಪಕ್ಷದವರೇ ಹೇಳ್ತಿದ್ದಾರೆ. ಯಡಿಯೂರಪ್ಪಗೆ ಕೌಂಟರ್ ಕೊಡೋಕೆ ಕೆಲವರನ್ನು ಮಂತ್ರಿ ಮತ್ತು ಡಿಸಿಎಂ ಮಾಡಿದ್ದಾರೆ. ಯಡಿಯೂರಪ್ಪ ಇದನ್ನ ಹೇಗೆ ನಿಭಾಯಿಸ್ತಾರೋ ಗೊತ್ತಿಲ್ಲ. ಈ ಗೋಲನ್ನು ಹೇಗೆ ಹೊಡೆಯುತ್ತಾರೋ ನೋಡಬೇಕು. ಅವರು ಬಿದ್ರೂ ನಾವು ಸರ್ಕಾರ ರಚಿಸುವ ಪ್ರಶ್ನೆಯಿಲ್ಲ, ನೂರಕ್ಕೆ ನೂರು ನಾವು ಚುನಾವಣೆಗೆ ಹೋಗುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಡಿಕೆಶಿ-ಬಿಎಸ್ ವೈ ಭೇಟಿ ಬಗ್ಗೆ ಎಂಎಲ್ ಸಿ ಸಿ.ಪಿ ಯೋಗೇಶ್ವರ್ ಹೇಳಿಕೆ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ನಮ್ಮ ಅಧ್ಯಕ್ಷರು ಸಿಎಂ ಭೇಟಿ ಮಾಡಿದ್ರೇ ತಪ್ಪೇನಿದೆ ಎಂದು ಪ್ರಶ್ನಿಸಿ, ನಾವೂ ಸಹ ಕೆಲ ಮಂತ್ರಿಗಳನ್ನ ಭೇಟಿ ಮಾಡ್ತೇವೆ. ನಮ್ಮ ಅಧ್ಯಕ್ಷರು ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ. ಬಿಜೆಪಿಯವರು ಏನೇ ಆರೋಪ ಮಾಡಿದ್ರೂ ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದರು.