ಡಿಕೆಶಿಯ ಮ್ಯೂಸಿಕಲ್ ಚೇರ್ ಹೇಳಿಕೆಗೆ ಬಿಜೆಪಿ ವ್ಯಂಗ್ಯ BJP Saaksha tv
ಬೆಂಗಳೂರು : ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಸಿಂದಗಿಯಲ್ಲಿ ಕೇಸರಿ ಪಡೆ ಗೆದ್ದಿದ್ದರೇ ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ವಿಚಾರವಾಗಿ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ಬಿಜೆಪಿ ತನ್ನ ಟ್ವೀಟ್ ನಲ್ಲಿ… ಉಪಚುನಾವಣೆಗೆ ಮುನ್ನ ಈ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ ಎನ್ನುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಈಗ ಈ ಫಲಿತಾಂಶ ಕೇಂದ್ರ ಸರ್ಕಾರದ ವಿರುದ್ಧದ ಜನಾದೇಶ ಎನ್ನುತ್ತಿದ್ದಾರೆ.
ಸಿಂದಗಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ ಹಾಗಾದರೆ ಸಿಂದಗಿ ಫಲಿತಾಂಶದ ಬಗ್ಗೆ ನಿಮ್ಮ ವ್ಯಾಖ್ಯಾನ ಏನು ಎಂದು ಪ್ರಶ್ನಿಸಿದೆ.
ಇನ್ನು ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರ ಮ್ಯೂಸಿಕಲ್ ಚೇರ್ ಹೇಳಿಕೆ ಬಗ್ಗೆ ಟ್ವೀಟ್ ಮಾಡಿದ್ದು, ಡಿಕೆಶಿ ಅವರೇ ಯಾರ ಖುರ್ಚಿ ಖಾಲಿ ಮಾಡಲಾಗುತ್ತಿದೆ?
ಯಾವ ಖುರ್ಚಿಗೆ ಎಷ್ಟು ಆಕಾಂಕ್ಷಿಗಳು? ಮ್ಯೂಸಿಕಲ್ ಚೇರ್ನಲ್ಲಿ ಯಾರ್ಯಾರು ಸಿಕ್ಕಿಕೊಂಡಿದ್ದಾರೆ? ದೀಪಾವಳಿಯ ಹೊಸ್ತಿಲಲ್ಲೂ ಇಷ್ಟೊಂದು ವಿಷಾದವೇಕೆ ಎಂದು ವ್ಯಂಗ್ಯವಾಡಿದೆ.
ಕೆಲವರು ರಾಜಕೀಯದಲ್ಲಿ ಅಜೆಂಡಾ ಇಟ್ಟುಕೊಂಡಿರುತ್ತಾರೆ, ಮೂರ್ನಾಲ್ಕು ಆಕಾಂಕ್ಷಿಗಳು ಇರುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೂ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಸಿದ್ದರಾಮಯ್ಯ ಅವರ ಬಯಕೆಗೂ ಸಂಬಂಧವಿದೆ.
ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷದಲ್ಲಿ ಮಹಾ ಸ್ಫೋಟಕ್ಕೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಸಿದ್ದರಾಮಯ್ಯ ಅವರ ಬಣ ನೀಡುತ್ತಿರುವ ಒಳ ಏಟಿನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತತ್ತರಿಸಿ ಹೋಗಿದ್ದಾರೆ.
ಉಪಚುನಾವಣೆ ಫಲಿತಾಂಶದ ದಿನವೇ ಡಿಕೆಶಿ ಅವರು ವಿಷಾದದ ಮಾತುಗಳನ್ನಾಡಿದ್ದಾರೆ. ಗೆಲುವನ್ನು ಸಂಭ್ರಮಿಸುವುದಕ್ಕೂ ಕೆಪಿಸಿಸಿ ಅಧ್ಯಕ್ಷರಿಗೆ ಅವರಿಗೆ ಸಾಧ್ಯವಾಗುತ್ತಿಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ.