ಬೆಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಉಚಿತವಾಗಿ ಬರುವ ಅಕ್ಕಿ ತಮಿಳುನಾಡು ಪಾಲಾಗುತ್ತಿದೆ. ಹರಿಯಾಣದಿಂದ ಬಂದ 1829 ಕ್ವಿಂಟಾಲ್ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಕಿ ಗೋಲ್‌ಮಾಲ್ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆಯೇ ಇಲ್ಲವೋ ಎಂಬುದು ತಿಳಿದಿಲ್ಲ. ಆದರೂ ಮುಖ್ಯಮಂತ್ರಿಗಳ ಗಮನಕ್ಕೆ ನಾವು ಇದನ್ನು ತರಬೇಕಿದೆ. ಹರಿಯಾಣದಿಂದ ಬಂದ ಅಕ್ಕಿಯನ್ನು ತಮಿಳುನಾಡಿನ ಹೊಸೂರು ವ್ಯಾಪಾರಿಗೆ ಮಾರಾಟ ಮಾಡಲಾಗಿದೆ. ಇದನ್ನು ಬಿಜೆಪಿಯ ಸಕ್ರಿಯ ನಾಯಕರೇ ವ್ಯಾಪಾರ ಮಾಡಿದ್ದಾರೆ. ಇದರಲ್ಲಿ ಮಂತ್ರಿಯೋರ್ವರ ಕೈವಾಡ ಇದೆ ಎಂದು ಕಿಡಿಕಾರಿದರು.
ಇನ್ನು ಅಕ್ಕಿ ದಾಸ್ತಾನು ಮಾಡಿದವರ ರಕ್ಷಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಗಬಾರದು. ಒಂದು ವೇಳೆ ಹೋಗಿದ್ದೇ ಆದಲ್ಲಿ ಅದು ಮುಖ್ಯಮಂತ್ರಿಗಳ ಕುತ್ತಿಗೆಗೆ ಕುತ್ತು ತರುತ್ತದೆ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಎಚ್ಚರಿಸಿದರು.
ಸರ್ಕಾರದ ನಿರ್ಧಾರಗಳಿಗೆ ರಾಜ್ಯ ಕಾಂಗ್ರೆಸ್ ನ ಬೆಂಬಲವಿದೆ. ಇಂತವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಅಕ್ರಮದ ಕುರಿತು ದಾಖಲೆ ಸಮೇತ ನಾವು ಪತ್ತೆ ಹಚ್ಚಿದ್ದೇವೆ. ಅಕ್ಕಿ ಶೇಖರಿಸಿಟ್ಟಿದ್ದ ಉಗ್ರಾಣ ಬಿಜೆಪಿ ಮುಖಂಡ ಬುಲೆಟ್ ಬಾಬುಗೆ ಸೇರಿದ್ದಾಗಿದೆ ಎಂದು ಬಹಿರಂಗಪಡಿಸಿದ ಡಿಕೆಶಿ, ಸರ್ಕಾರ ಆಹಾರ ಕಾಯಿದೆ ಪ್ರಕಾರ ಇದರ ಬಗ್ಗೆ ಕಠಿಣ ಕ್ರಮತೆಗೆದುಕೊಳ್ಳಬೇಕು. ಬಿಜೆಪಿ ಮುಖಂಡನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಪ್ರತಿಯೊಂದು ಜಿಲ್ಲೆಯಲ್ಲಿಯೂ ಇದೇ ರೀತಿ ಅಕ್ರಮ ವ್ಯಾಪಾರವಾಗುತ್ತಿದೆ. ಅಕ್ಕಿಯನ್ನು ಪಾಲಿಶ್ ಮಾಡಿ ಕಾಳಸಂತೆಯಲ್ಲಿ ಕೆಜಿಗೆ 30-40 ರೂ. ನಂತೆ ಅಕ್ಕಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.








