BJP : ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ, ಮುಖ್ಯಮಂತ್ರಿಗಳ ಬಳಿ ಚರ್ಚೆ: ಸುಧಾಕರ್
ಬೆಳಗಾವಿ, ಡಿಸೆಂಬರ್ 22, ಗುರುವಾರ
ಮೀಸಲಾತಿಗೆ ಆಗ್ರಹಿಸಿ ಅನೇಕ ಸಮುದಾಯಗಳು ಹೋರಾಟ ಮಾಡುತ್ತಿವೆ. ಅದೇ ರೀತಿ ಒಕ್ಕಲಿಗರು ಕೂಡ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಕಂದಾಯ ಸಚಿವರಾದ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ಬದುಕುತ್ತಿರುವ ಒಕ್ಕಲಿಗರು ರಾಜ್ಯದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಅನ್ನದಾತರಾದ ಒಕ್ಕಲಿಗ ಸಮಾಜದವರು ನ್ಯಾಯಯುತವಾದ ಬೇಡಿಕೆಯನ್ನೇ ಇಟ್ಟಿದ್ದಾರೆ ಎಂದರು.
ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಬಗ್ಗೆ ಸಭೆ ಕೂಡ ನಡೆದಿತ್ತು. ಅದರ ಭಾಗವಾಗಿಯೇ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕ ಮಿತ್ರರೊಂದಿಗೆ, ಕಂದಾಯ ಸಚಿವರಾದ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿಯೂ ಈ ಬಗ್ಗೆ ಚರ್ಚಿಸಲಾಗುವುದು. ಸರ್ಕಾರವು ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವ ವಿಶ್ವಾಸವಿದೆ. ಬಲಹೀನ ವರ್ಗಗಳಿಗೆ ಈಗಾಗಲೇ ಮೀಸಲಾತಿ ಹೆಚ್ಚಳ ಮಾಡುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ. ಅದೇ ರೀತಿ ಕಾನೂನಿನ ತೊಡಕುಗಳನ್ನು ಅವಲೋಕಿಸಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಬೆಂಗಳೂರಿಗೆ ಹೋದ ಬಳಿಕ ಸ್ವಾಮೀಜಿಗಳ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಿ, ರೂಪರೇಷೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಒಕ್ಕಲಿಗ ಸಮುದಾಯದಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಹೆಚ್ಚಳ ಮಾಡುವ ಎಲ್ಲಾ ಪ್ರಯತ್ನ ಮಾಡಲಾಗುವುದು. ಸರ್ಕಾರ ಇದಕ್ಕಾಗಿ ಸೂಕ್ತ ಕ್ರಮ ವಹಿಸಲಿದೆ ಎಂದರು.
ಕಾಂಗ್ರೆಸ್ ನಾಯಕರು ಗಂಭೀರವಾಗಿಲ್ಲ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕಾಂಗ್ರೆಸ್ ನಾಯಕರು ಗಂಭೀರವಾಗಿದ್ದರೆ, ಅಧಿಕಾರವಿದ್ದ ಸಂದರ್ಭದಲ್ಲೇ ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಹತ್ತು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ವಿವಾದ ಬಗೆಹರಿಸಲು ಏನೂ ಮಾಡಿಲ್ಲ ಎಂದರು.
ಮಹಾಜನ್ ಆಯೋಗದ ವರದಿಯಲ್ಲಿ ಗಡಿಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಮಹಾರಾಷ್ಟ್ರ ನಾಯಕರು ಹಾಗೂ ರಾಜಕೀಯ ಪಕ್ಷಗಳು ಪದೇ ಪದೆ ವಿವಾದ ಮಾಡುತ್ತಿದ್ದಾರೆ. ಇದರಲ್ಲಿ ವಿವಾದ ಮಾಡುವಂಥದ್ದು ಏನೂ ಇಲ್ಲ. ಈಗಾಗಲೇ ಕೇಂದ್ರ ಗೃಹ ಸಚಿವರು ಎರಡೂ ರಾಜ್ಯಗಳ ಸಭೆ ಕರೆದು ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಯಾವುದೇ ವಿವಾದ ಮಾಡದೆ ಕಾಯಬೇಕು ಎಂದರು.