ಮೀಸಲಾತಿಯ ಹೋರಾಟವನ್ನು ಬಿಎಸ್ ವೈ ಹಾಗೂ ಪಕ್ಷ ವಿರೋಧಿಸಿಲ್ಲ – ಬಿ ವೈ ವಿಜಯೇಂದ್ರ
ಕೊಪ್ಪಳ : ಏನೇ ಸವಾಲುಗಳು ಬಂದರೂ ಎದುರಿಸುವ ಶಕ್ತಿ ಯನ್ನು ಹನುಮಂತನ ಹತ್ತಿರ ಬೇಡಿಕೊಳ್ಳಲು ಹಾಗೂ ಕೊರೊನಾದ ಕತ್ತಲಿನಿಂದ ಬೆಳಕಿನತ್ತ ಸಾಗಲು ಪೂಜೆ ಮತ್ತು ಹವನ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಅಂಜನಾದ್ರಿಗೆ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾತನಾಡಿದ ವಿಜಯೇಂದ್ರ ಬಿಎಸ್ ವೈ ರ ಉತ್ತಾರಾಧಿಕಾರಿಯೇ ಎನ್ನುವ ಪ್ರಶ್ನೆಗೆ ಇದೇ ವೇಳೆ ಉತ್ತರಿಸಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷ ಅಲ್ಲ ಇಲ್ಲಿ ಪಕ್ಷಕ್ಕಾಗಿ ದುಡಿಯುವವರಿಗೆ, ಸಮಯ ನೀಡುವವರಿಗೆ ಜನರ ಮನಸ್ಸು ಗೆಲ್ಲುವವರು ಯಾರು ಎನ್ನುವದನ್ನು ಗಮನಿಸಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ. ಮೀಸಲಾತಿಯ ಹೋರಾಟವನ್ನು ಬಿಎಸ್ ವೈ ಯಾಗಲಿ ನಮ್ಮ ಪಕ್ಷ ವಿರೋಧಿಸಿಲ್ಲ. ಬದಲಾಗಿ ಸಂವಿಧಾನದ ಅಡಿಯಲ್ಲಿ ಕಾನೂನಾತ್ಮಕವಾಗಿ ಪರಿಹಾರವನ್ನು ನೀಡುವ ಕೆಲಸ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಹೆಚ್ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಬಿ.ವೈ.ವಿಜಯೇಂದ್ರ ವಿಶ್ವನಾಥ್ ಅವರಿಗೆ ಬಹುಶಃ ಮಾಹಿತಿ ಕೊರತೆ ಇದೆ. ಮೈಸೂರು ಬಿಟ್ಟು ಬೇರೆ ಬೇರೆ ಪ್ರವಾಸ ಮಾಡಿದ್ರೆ ವಿಷಯಗಳು ಗೊತ್ತಾಗುತ್ತವೆ. ಇವತ್ತು ಕೊಪ್ಪಳ ಗಂಗಾವತಿಗೆ ಬಂದ್ರೆ ಯಡಿಯೂರಪ್ಪ ಸರ್ಕಾರ ಅಭಿವೃದ್ಧಿ ಮಾಡಿದ್ದಾರೆ ಅಂತಾ ಗೊತ್ತಾಗುತ್ತೆ. ಬಹುಶಃ ಅವರು ಹಿಂದಿನ ಸರ್ಕಾರದ ಮನಸ್ಥಿತಿಯಲ್ಲಿದ್ದಾರೆ. ಈಗ ಇರೋದು ಬಿಜೆಪಿ ಸರಕಾರ ಬಿಎಸ್ ವೈ ನೇತೃತ್ವದ ಸರಕಾರ ಎಂದು ಟಾಂಗ್ ಕೊಟ್ಟಿದ್ದಾರೆ.
ಅಲ್ಲದೇ 15 ಕೇತ್ರದ ಉಪಚುನಾವಣೆಯಲ್ಲಿ 12 ಕ್ಷೇತ್ರದಲ್ಲಿ ಭರ್ಜರಿ ಕಮಲ ಅರಳಿದೆ. ಮಸ್ಕಿ ಹಾಗೂ ಬಸವ ಕಲ್ಯಾಣ ಕ್ಷೇತ್ರದಲ್ಲಿ ಕಮಲ ಅರಳಲಿದೆ. ಬಿಜೆಪಿಗೆ ಬಹುಮತ ಇರದೆ ಇದ್ದ ಕಾರಣ ಕೆಲವರಿಗೆ ಸಚಿವ ಸ್ಥಾನ ಸಿಗಲಿಲ್ಲ. ನಮ್ಮ ಸರ್ಕಾರ ರಚನೆಗೆ ಕಾರಣರಾದವರಿಗೆ ಸಚಿವ ಸ್ಥಾನ ನೀಡಬೇಕಾದ ಅಗತ್ಯವಿತ್ತು. ಹಾಗಾಗಿ ಕೆಲವರಿಗೆ ಅಸಮಾಧಾನವಾಗಿದೆ. ಯಡಿಯೂರಪ್ಪ ಅವರಿಗೆ ಸರ್ಕಾರವನ್ನು ಸರಿದೂಗಿಸಿಕೊಂಡು ಹೋಗುವ ಶಕ್ತಿ ಇದೆ ಎಂದಿದ್ದಾರೆ.