ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಬಿಜೆಪಿ ಶಾಸಕರು, ಸಂಸದರ ತುರ್ತು ಸಭೆ ಕರೆದಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ ಸಂಜೆ 6 ಗಂಟೆಗೆ ಬಿಜೆಪಿ ಶಾಸಕರು ಮತ್ತು ಸಂಸದರ ತುರ್ತುಸಭೆ ಕರೆದಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಸೋಂಕು ಪೀಡಿತರ ಪ್ರಮಾಣ ಜಾಸ್ತಿ ಆಗಿ,ಆತಂಕದ ಸ್ಥಿತಿ ತಲಪುತ್ತಿದ್ದು, ನಗರದ ಶಾಸಕರು ಹಾಗೂ ಸಂಸದರನ್ನು ಕಂಗೆಡಿಸಿದೆ. ನಿತ್ಯ ಜನರನ್ನು ಭೇಟಿ ಮಾಡುವ ಅನಿವಾರ್ಯತೆ ಒಂದು ಕಡೆಯಾದರೆ, ಮತ್ತೊಂದು ಕಡೆ ಹೀಗೆ ಬರುವವರಲ್ಲಿ ಸೋಂಕಿತರು ಯಾರು? ಯಾರು ಅಲ್ಲ ಎಂಬುದನ್ನು ಪತ್ತೆ ಹಚ್ಚುವುದೇ ಶಾಸಕರ ಕಚೇರಿಗಳಲ್ಲಿನ ಆಪ್ತ ಸಿಬ್ಬಂದಿಗೆ ದೊಡ್ಡ ಸಮಸ್ಯೆಯಾಗಿದೆ.
ಬಸವನಗುಡಿ ಕ್ಷೇತ್ರದ ಬಿಜೆಪಿ ಶಾಸಕ ಎಲ್. ಎ . ರವಿ ಸುಬ್ರಹ್ಮಣ್ಯ ನಗರದಲ್ಲಿ ಸೋಂಕು ಪೀಡಿತರ ಪ್ರಮಾಣ ಹೆಚ್ಚುತ್ತಿರುವುದು ಆತಂಕ ತರಿಸಿದೆ ಎಂದರು. ಪಾಲಿಕೆ ಅಧಿಕಾರಿಗಳೊಂದಿಗೆ ತಾವು ಈಗಾಗಲೇ ನಿರಂತರ ಸಬೆಗಳನ್ನು ನಡೆಸುತ್ತಿದ್ದು ಸೋಂಕು ಹೆಚ್ಚು ಪ್ರಮಾಣದಲ್ಲಿ ಹಬ್ಬದಿರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯಾದರೂ ಪರಿಸ್ಥಿತಿ ಅಂದಾಜಿಗೆ ಸಿಗುತ್ತಿಲ್ಲ ಎಂದಿದ್ದಾರೆ.
ದಿನ ನಿತ್ಯ ಗಿರಿನಗರದಲ್ಲಿರುವ ತಮ್ಮ ಕಚೇರಿಗೆ ವಿವಿಧ ಕೆಲಸಗಳಿಗಾಗಿ ಬರುವ ಸಾರ್ವಜನಿಕರನ್ನು ಅನಿವಾರ್ಯವಾಗಿ ಭೇಟಿ ಆಗಲೇ ಬೇಕಾದ ಸನ್ನಿವೇಶ ಎದುರಾಗಿದೆ.ಆದರೆ ಈಗಿನ ಸನ್ನಿವೇಶದಲ್ಲಿ ಕಚೇರಿಯನ್ನು ಬೇರೆ ದಾರಿಯೇ ಇಲ್ಲದೆ ಸೋಮವಾರದ ವರೆಗೆ ಮುಚ್ಚಲಾಗಿದೆ ಎಂದರು. ಬಸನಗುಡಿ ಕ್ಷೇತ್ರದಲ್ಲಿ 150 ಮಂದಿಗೆ ಸೋಂಕು ತಗುಲಿದ್ದರೆ, ಚಿಕ್ಕಪೇಟೆಯಲ್ಲಿ 300 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ನಿಯಂತ್ರಣಕ್ಕೆ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆ ತುರ್ತು ಸಭೆಯನ್ನು ಕರೆದಿರುವ ಸಿಎಂ ನಡೆಯನ್ನು ನೋಡುತ್ತಿದ್ದರೆ. ಬೆಂಗಳೂರಿನಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.







