ಬೆಂಗಳೂರು : ಕಳೆದ ಒಂದು ವಾರದಿಂದ ವಿಧಾನಸಭಾ ಸ್ಪೀಕರ್ ಮತ್ತು ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ನಡುವೆ ಶೀತಲ ಸಮರ ನಡೆಯುತ್ತಿದೆ. ಇದೀಗ ಸ್ಪೀಕರ್ ಪರ ಬಿಜೆಪಿಯ ಕೆಲ ಶಾಸಕರು ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ ಹೆಚ್.ಕೆ.ಪಾಟೀಲ್ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಔಷಧ ಮತ್ತು ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಭ್ರಷ್ಟಚಾರ ನಡೆದಿದೆ ಎಂದು ದೂರುಗಳಿಗೆ ಕೇಳಿ ಬಂದಿದ್ದವು. ಆ ಹಿನ್ನೆಯಲ್ಲಿ ಲೆಕ್ಕ ಪತ್ರ ಸಮಿತಿ ಸ್ಥಳ ಪರಿಶೀಲನೆ ನಡೆಸಲು ಮುಂದಾಗಿತ್ತು. ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆ ನೀಡಿದ್ದರು. ಆದ್ದರಿಂದ ಸ್ಪೀಕರ್ ವಿರುದ್ದ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಹೆಚ್. ಕೆ ಪಾಟೀಲ್ ಮಾಧ್ಯಮಗಳ ಮುಂದೆ ಹೇಳಿದ್ದರು.
ಈ ವಿಚಾರವಾಗಿ ಮಂಗಳವಾರ ನಡೆದ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಬಿಜೆಪಿ ಶಾಸಕರು ಪಾಟೀಲ್ ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಹೆಚ್. ಕೆ. ಪಾಟೀಲ್ ಸ್ಪೀಕರ್ ವಿರುದ್ದ ಹಕ್ಕುಚ್ಯುತಿ ಮಂಡನೆ ವಿಚಾರ ಪ್ರಸ್ತಾಪಿಸಿದಾಗ ಬಿಜೆಪಿ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೆ ಸಭೆಯಲ್ಲಿ ಚರ್ಚೆ ಮಾಡದೆ ಮಾದ್ಯಮಗಳ ಮುಂದೆ ಏಕೆ ಹಕ್ಕುಚ್ಯುತಿ ಬಗ್ಗೆ ಏಕೆ ಹೇಳಿದ್ದೀರಿ, ಯಾವ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಪಾಟೀಲ್ರನ್ನು ಪ್ರಶ್ನಿಸಿದರು.
ಸಾಮಾನ್ಯವಾಗಿ ಸಭೆಯಲ್ಲಿ ಚರ್ಚಿಸಿ ಸ್ಪೀಕರ್ ಗೆ ವರದಿ ಸಲ್ಲಿಸಬೇಕು. ಅವರ ಅನುಮತಿ ಪಡೆದು ಪರಿಶೀಲನೆ ನಡೆಸಬೇಕು. ಈ ವಿಷಯದಲ್ಲಿ ನೀವು ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದು ಹೆಚ್.ಕೆ. ಪಾಟೀಲ್ ವಿರುದ್ದ ಬಿಜೆಪಿ ಶಾಸಕರು ಮುಗಿಬಿದ್ದಿದ್ದರು ಎನ್ನಲಾಗಿದೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಭಾಧ್ಯಕ್ಷರಿಗೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಅಧಿಕಾರವಿದೆ. ಅಲ್ಲದೆ ಈ ವಿಷಯದಲ್ಲಿ ಪಾಟೀಲ್ ರು ದುಡುಕಿದ್ದೀರಿ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ .








