UP Election – ಬಿಜೆಪಿ ಸಂಸದೆ ರೀಟಾ ಬಹುಗುಣ ಅವರ ಪುತ್ರ ಎಸ್‌ಪಿಗೆ ಸೇರ್ಪಡೆ
ಉತ್ತರಪ್ರದೇಶದ ಏಳನೇ ಹಂತದ ಚುನಾವಣೆಗೆ ಮುನ್ನವೇ ಬಿಜೆಪಿಗೆ ಮತ್ತೊಂದು ಹಿನ್ನಡೆಯುಂಟಾಗಿದೆ. ಬಿಜೆಪಿ ಸಂಸದೆ ರೀಟಾ ಬಹುಗಣ ಜೋಶಿ ಅವರ ಪುತ್ರ ಮಯಾಂಕ್ ಶನಿವಾರ ಅಖಿಲೇಶ ನೇತೃತ್ವದ ಎಸ್‌ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಅಜಂಗಢದಲ್ಲಿ ನಡೆದ ಚುನಾವಣಾ ರ್ಯಾಲಿಯ ವೇದಿಕೆಯಿಂದ ಅಖಿಲೇಶ್ ಇದನ್ನು ಘೋಷಿಸಿದರು. ಮಯಾಂಕ್ ಅವರನ್ನು ವೇದಿಕೆಗೆ ಕರೆದು, ರೀಟಾ ಬಹುಗಣ ಜೋಶಿ ಅವರ ಪುತ್ರ ಮಯಾಂಕ್ ಕೂಡ ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ಅಖಿಲೇಶ್ ಹೇಳಿದ್ದಾರೆ.
ಅವರು ನಮ್ಮ ದೊಡ್ಡ ನಾಯಕ ಬಹುಗುಣ ಜಿಯವರ ಕುಟುಂಬದಿಂದ ಬಂದವರು. ಅವರ ಆಗಮನದಿಂದ ಪಕ್ಷಕ್ಕೆ ಬಲ ಬರಲಿದೆ. ಈ ವೇಳೆ ಮಾಜಿ ಐಎಎಸ್ ಅಧಿಕಾರಿ ಫತೇಹ್ ಬಹದ್ದೂರ್ ಸಿಂಗ್ ಕೂಡ ಎಸ್ಪಿಗೆ ಸೇರ್ಪಡೆಯಾದರು.
ಇದಕ್ಕೂ ಮೊದಲು, ಫೆಬ್ರವರಿ 23 ರಂದು ಲಕ್ನೋದಲ್ಲಿ ಮತದಾನಕ್ಕೆ ಮುನ್ನ ಫೆಬ್ರವರಿ 22 ರಂದು ಮಯಾಂಕ್, ಅಖಿಲೇಶ್ ಅವರನ್ನು ಭೇಟಿ ಮಾಡಿದ್ದರು. ಅದರ ಫೋಟೋವನ್ನು ಅಖಿಲೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ನಂತರ ಮಯಾಂಕ್ ಅದನ್ನು ಸೌಜನ್ಯದ ಭೇಟಿ ಎಂದು ಕರೆದರು.
ಅಂದಿನಿಂದ ಮಾಯಾಂಕ್ ಎಸ್ಪಿ ಸೇರುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ರೀಟಾ ಬಹುಗುಣ ಅವರು ತಮ್ಮ ಮಗ ಮಯಾಂಕ್‌ಗೆ ಲಕ್ನೋ ಕ್ಯಾಂಟ್‌ನಿಂದ ಬಿಜೆಪಿಯಿಂದ ಟಿಕೆಟ್ ಬಯಸುತ್ತಿದ್ದರು. ಇದಕ್ಕಾಗಿ ಸ್ವತಃ ಅವರೇ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಮಾತನಾಡಿದ್ದರು. ಆದರೆ ಬಿಜೆಪಿ ಅವರಿಗೆ ಟಿಕೆಟ್ ನೀಡಿರಲಿಲ್ಲ.