ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ಮತ್ತು ಆಪರೇಷನ್ ಕಮಲದ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಸ್ಪೋಟಕ ಹೇಳಿಕೆಯೊಂದನ್ನು ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಸೂಚಿಸಿದರೆ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ನಾವು ಬಾಹ್ಯ ಬೆಂಬಲ ನೀಡಲು ಸಿದ್ಧ ಎಂದು ಹೇಳುವ ಮೂಲಕ ರಾಜಕೀಯ ಪಡಸಾಲೆಯಲ್ಲಿ ಹೊಸ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಅಚ್ಚರಿಯ ವಿಶ್ಲೇಷಣೆ ನಡೆಸಿದರು. ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಬಿಜೆಪಿಗೆ ಬಾಹ್ಯ ಬೆಂಬಲ ಕೊಟ್ಟರೆ ನಾವು ಒಪ್ಪುತ್ತೇವೆ. ಆದರೆ, ಪರಿಸ್ಥಿತಿ ಬದಲಾಗಿ ಡಿ.ಕೆ. ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ನಮ್ಮ ಕೇಂದ್ರದ ವರಿಷ್ಠರು ತೀರ್ಮಾನಿಸಿದರೆ, ಅದಕ್ಕೂ ನಾವು ಬದ್ಧರಿದ್ದೇವೆ. ವರಿಷ್ಠರ ಸೂಚನೆಯಂತೆ ನಾವು ಡಿಕೆಶಿಗೆ ಬಾಹ್ಯ ಬೆಂಬಲ ಕೊಡಲು ಯಾವುದೇ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದರು.
ಸವಾಲು ಹಾಕಿದ ಮಾಜಿ ಸಿಎಂ
ಪ್ರಸ್ತುತ ಸನ್ನಿವೇಶದಲ್ಲಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಬಿಡುವುದು ಅಷ್ಟು ಸುಲಭವಲ್ಲ. ನಾವೂ ಅವರೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ಮಾಡುವ ಆಲೋಚನೆಯಲ್ಲಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಿಜವಾಗಿಯೂ ಘನತೆ, ಗೌರವ ಹಾಗೂ ಮಾನ ಮರ್ಯಾದೆ ಇದ್ದರೆ ತಕ್ಷಣವೇ ಸರ್ಕಾರವನ್ನು ವಿಸರ್ಜನೆ ಮಾಡಿ, ಹೊಸದಾಗಿ ಜನರ ಆಶೀರ್ವಾದ ಪಡೆದುಕೊಂಡು ಬರಲಿ ಎಂದು ನೇರ ಸವಾಲು ಹಾಕಿದರು.
ಡಿ.ಕೆ. ಶಿವಕುಮಾರ್ ಅವರ ಬಳಿ 70 ಜನ ಶಾಸಕರ ಬೆಂಬಲವಿದ್ದರೆ, ಕಾಂಗ್ರೆಸ್ ಪಕ್ಷವೇ ಅವರನ್ನು ಮುಖ್ಯಮಂತ್ರಿ ಮಾಡುತ್ತದೆ. ಇದಕ್ಕೆ ಕಾಂಗ್ರೆಸ್ಸಿನ ಯಾವೊಬ್ಬ ಶಾಸಕರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಏಕೆಂದರೆ, ಈಗ ಸರ್ಕಾರ ಬಿದ್ದುಹೋಗಿ ಪುನಃ ಚುನಾವಣೆ ಎದುರಾದರೆ ಗೆಲ್ಲುವುದಿಲ್ಲ ಎಂಬ ಖಾತ್ರಿ ಶಾಸಕರಿಗಿದೆ. ಹೀಗಾಗಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಅವರು ಡಿಕೆಶಿ ಸಿಎಂ ಆದರೂ ಮೌನವಾಗಿರುತ್ತಾರೆ ಎಂದು ಸದಾನಂದಗೌಡರು ವಿಶ್ಲೇಷಿಸಿದರು.
ಮೋದಿ ಶಾ ಮಾತೇ ಅಂತಿಮ
ಬಿಜೆಪಿ ತನ್ನ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿದೆ. ಆದರೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಬಾರದು ಎಂಬ ಕಾಳಜಿ ನಮ್ಮಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏನೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ. ಅವರು ಹೇಳಿದಂತೆ ಕೇಳುತ್ತೇವೆ ಎಂದು ಸದಾನಂದಗೌಡರು ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದರು.








