BJP tweet-ನಕಲಿ ಗಾಂಧಿ ಪರಿವಾರಕ್ಕಾದರೇ “ಅಧ್ಯಕ್ಷರ ನೇಮಕ” ಇತರರಿಗಾದರೆ “ಚುನಾವಣೆ
ಬೆಂಗಳೂರು : ನಕಲಿ ಗಾಂಧಿ ಪರಿವಾರಕ್ಕಾದರೇ “ಅಧ್ಯಕ್ಷರ ನೇಮಕ” ಇತರರಿಗಾದರೆ “ಚುನಾವಣೆ ಎಂದು ಬಿಜೆಪಿ ಟೀಕೆ ಮಾಡಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ನಲ್ಲಿ.. ಮಲ್ಲಿಕಾರ್ಜುನ ಖರ್ಗೆಯವರು ಚುನಾವಣೆ ಮೂಲಕ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಪಕ್ಷದಲ್ಲಿ ಎಂದಾದರೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆಯಾ ? ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಬಿಜೆಪಿಯಲ್ಲಿ ಇದೆಯೆ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ. ಬರೋಬ್ಬರಿ 22 ವರ್ಷಗಳ ಬಳಿಕ ಅಂದರೆ 2022 ರಲ್ಲಿ ಭಾರತೀಯರೊಬ್ಬರನ್ನು ಕಾಂಗ್ರೆಸ್ ತನ್ನ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ. ಕಾಂಗ್ರೆಸ್ ಕೊನೆಯ ಎರಡು ಅಧ್ಯಕ್ಷರನ್ನು ಬದಲಾಯಿಸುವ ವೇಳೆಯೊಳಗೆ, ಬಿಜೆಪಿ ಪಕ್ಷದಲ್ಲಿ 10 ಅಧ್ಯಕ್ಷರು ಕಾರ್ಯ ನಿರ್ವಹಿಸಿದ್ದಾರೆ. ಯಾವ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಹೆಚ್ಚಿದೆ?
2000 ದಿಂದ 2022 ರವರೆಗಿನ ಸೋನಿಯಾ ಗಾಂಧಿ ಅವಧಿಯಲ್ಲಿ ರಾಹುಲ್ ಗಾಂಧಿ ಚುನಾವಣೆಯಿಲ್ಲದೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಹೇಗೆ? ನಕಲಿ ಗಾಂಧಿ ಪರಿವಾರಕ್ಕಾದರೇ “ಅಧ್ಯಕ್ಷರ ನೇಮಕ” ಇತರರಿಗಾದರೆ “ಚುನಾವಣೆ”, ಇದು ನಿಮ್ಮ ನೀತಿಯೇ ಸಿದ್ದರಾಮಯ್ಯ?
ಬಿಜೆಪಿ ಪಕ್ಷದ ನೀತಿ ನಿಯಮದಂತೆ ರಾಷ್ಟ್ರೀಯ ಅಧ್ಯಕ್ಷರ ನೇಮಕ ನಡೆಯುತ್ತದೆ.ಜೆಡಿಎಸ್ ಪಕ್ಷದಿಂದ ವಲಸೆ ಬಂದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ಸಿನ ಅಸಲಿ ಕಥೆ ತಿಳಿದಿದೆಯೇ? ಸುಮಾರು 137 ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷೀಯ ಹುದ್ದೆಗೆ ಕೇವಲ 6 ಬಾರಿ ಮಾತ್ರ ಚುನಾವಣೆ ನಡೆದಿದ್ದೇಕೆ ಎಂದು ಪ್ರಶ್ನೆಗಳ ಸುರಿಮಳೆಗೈದಿದೆ.