ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣವೇ ಇದಕ್ಕೆ ಸಾಕ್ಷಿ ಎನ್ನುವಂತಾಗಿದೆ. ರಾಜ್ಯದ 100 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ (BJP Fake list) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಿಜೆಪಿ ಕೇಂದ್ರದ ಹೈಕಮಾಂಡ್ ಆದೇಶ ಪಟ್ಟಿಯನ್ನು ಹೋಲುವಂತೆ ಬಿಜೆಪಿಯ 100 ಅಭ್ಯರ್ಥಿಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪಟ್ಟಿಯನ್ನು ಹಿಡಿದುಕೊಂಡು ಹಲವು ಟಿಕೆಟ್ ಆಕಾಂಕ್ಷಿಗಳು ಪಕ್ಷದ ನಾಯಕರಿಗೆ ಕರೆ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ನಕಲಿ ಪಟ್ಟಿಯಾಗಿದೆ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟೀಕರಣ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳೀನ್ ಕುಮಾರ್ ಕಟೀಲ್, ನಮ್ಮ ಪಕ್ಷವು ಆಂತರಿಕ ಪ್ರಜಾಪ್ರಭುತ್ವವನ್ನು ಗೌರವಿಸಿ, ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಈ ಸಮಯದಲ್ಲಿ ಸುಳ್ಳು ಅಭ್ಯರ್ಥಿಗಳ ಪಟ್ಟಿ ಹರಿಬಿಟ್ಟು ಕುತ್ಸಿತ ಮನಸ್ಥಿತಿಗಳು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿವೆ. ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು. ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಈ ಪಟ್ಟಿಯು ‘FAKE’ ಆಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಏ.8 ಅಥವಾ ಏ.9ರಂದು ಬಿಡುಗಡೆ ಮಾಡಲಾಗುತ್ತದೆ. ಕೇಂದ್ರ ಸಂಸದೀಯ ಮಂಡಳಿಗೆ ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಯಾವುದೇ ಗೊಂದಲಗಳು ಇರದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ನಂತರ, 2ನೇ ಪಟ್ಟಿಯಲ್ಲಿ ಗೊಂದಲವಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.








