ರಾಜ್ಯದ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಹೊಂದಿದೆ. ಹಾಗಾಗಿ ವಿಧಾನಸಭೆಯ ಸಭಾಧ್ಯಕ್ಷರ ಸ್ಥಾನಕ್ಕೆ ತಮ್ಮ ಪಕ್ಷದವರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಆಯ್ಕೆ ಮಾಡಿತ್ತು. ಇದೀಗ ಉಪಾಧ್ಯಕ್ಷ ಸ್ಥಾನಕ್ಕೂ ತನ್ನವರನ್ನು ಆಯ್ಕೆ ಮಾಡಲು ಬಿಜೆಪಿ ಮುಂದಾಗಿದೆ. ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ, ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆಗ ಸಚಿವ ಸ್ಥಾನ ಕೈ ತಪ್ಪಿದ ಕಾರಣಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಇದರಿಂದ ಅಂದಿನ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ತನ್ನ ಪಾಲಿಗೆ ಸಭಾಧ್ಯಕ್ಷರ ಸ್ಥಾನ ಪಡೆದರೇ, ಜೆಡಿಎಸ್ ತನ್ನ ಪಾಲಿಗೆ ಉಪಸಭಾಧ್ಯಕ್ಷರ ಸ್ಥಾನ ಪಡೆಯುವ ಮೂಲಕ ಕೃಷ್ಣಾರೆಡ್ಡಿಯವರನ್ನು ಉಪಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.
ಉಪಸಭಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ರಾಜೀನಾಮೆ
ಪ್ರಸ್ತುತ ಬಿಜೆಪಿ ಬಹುಮತ ಹೊಂದಿದೆ. ಹಾಗಾಗಿ ಉಪಸಭಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿ, ಶಾಸಕರನ್ನು ಸಮಾಧಾನ ಪಡಿಸುವ ತಂತ್ರಕ್ಕೆ ಬಿಎಸ್ ವೈ ಮುಂದಾಗಿದ್ದಾರೆ. ಈ ಮಾಹಿತಿಯನ್ನು ಸಿ.ಎಂ ಯಡಿಯೂರಪ್ಪನವರು ಕೃಷ್ಣಾರೆಡ್ಡಿಯವರಿಗೆ ನೀಡಿದ್ದರು. ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಉಪಸಭಾಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ತಂದು ಹುದ್ದೆಯಿಂದ ಕೆಳಗಿಳಿಸಿದ ಘಟನೆ ನಡೆದಿಲ್ಲ. ಉಪಸಭಾಧ್ಯಕ್ಷರು ಮುಜಗರಕ್ಕೆ ಒಳಗಾಗಬಾರದು.

ಅದಕ್ಕಾಗಿ ಅವರಾಗಿಯೇ ರಾಜೀನಾಮೆ ನೀಡಲಿ ಎಂಬುದು ಬಿಜೆಪಿ ಲೆಕ್ಕಚಾರವಾಗಿತ್ತು. ಕೃಷ್ಣಾರೆಡ್ಡಿಯವರಿಗೆ ರಾಜೀನಾಮೆ ನೀಡುವಂತೆ ಬಿಜೆಪಿ ಎರಡು ಬಾರಿ ತಿಳಿಸಿತ್ತು. ಆದರೆ ಕೃಷ್ಣಾರೆಡ್ಡಿಯವರು ಹಿಂದೇಟು ಹಾಕಿದ್ದರು. ಕೃಷ್ಣಾರೆಡ್ಡಿಯವರು ಉಪಸಭಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೇ ಅವಿಶ್ವಾಸ ನೋಟಿಸ್ ನೀಡಬೇಕಾಗುತ್ತದೆ ಎಂದು ಬಿಜೆಪಿ ಹೇಳಿತ್ತು. ಇದಾದ ಬಳಿಕ ಜಿ.ಕೆ ಕೃಷ್ಣಾರೆಡ್ಡಿಯವರು ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಿಗ್ಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮನೆಗೆ ತೆರಳಿದ್ದ ಕೃಷ್ಣಾರೆಡ್ಡಿಯವರು ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾವೆ ನೀಡಿದ್ದಾರೆ. ಇದರಿಂದಾಗಿ ಸದನದಲ್ಲಿ ಕೃಷ್ಣಾರೆಡ್ಡಿಯವರ ವಿರುದ್ಧ ಅವಿಶ್ವಾಸ ಮಂಡನೆ ಮಾಡುವುದನ್ನು ಬಿಜೆಪಿ ನಿಲ್ಲಿಸಿದೆ.
ಶಾಸಕ ಆನಂದ್ ಮಾಮನಿ ಉಪಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ
ಇನ್ನೂ ಕೃಷ್ಣಾರೆಡ್ಡಿಯವರ ರಾಜೀನಾಮೆಯಿಂದ ತೆರವಾದ ಉಪಸಭಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶಾಸಕ ಆನಂದ್ ಮಾಮನಿ ಆಯ್ಕೆಯಾಗುವ ಸಾಧ್ಯತೆಯಿದೆ. ಸವದತ್ತಿ ಶಾಸಕ ಆನಂದ್ ಮಾಮನಿ ಸತತವಾಗಿ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅಲ್ಲದೆ ಮೂಲ ಬಿಜೆಪಿಗರು. ಇವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನ ಹೊರ ಹಾಕಿದ್ದರು. ಆದ್ದರಿಂದ ಇವರನ್ನು ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ, ಸಮಾಧಾನ ಪಡಿಸುವ ತಂತ್ರಕ್ಕೆ ಬಿಜೆಪಿ ಮುಂದಾಗಿದೆ.








