ಬೆಂಗಳೂರು : ಇಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಇಂದು ಬೆಳಗ್ಗೆ ಸಿಎಂ ನಿವಾಸ ಕಾವೇರಿಗೆ ಆಗಮಿಸಿದ ಸಂತೋಷ್, ಯಡಿಯೂರಪ್ಪರ ಜೊತೆ ಉಪಹಾರ ಮಾಡುತ್ತಾ ಮಾತುಕತೆ ನಡೆಸಿದ್ದಾರೆ.
ಇದಾದ ಬಳಿಕ ಸಂತೋಷ್ ಅವರು ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಸಚಿವ ವಿ.ಸೋಮಣ್ಣ ಅವರು ಸಂತೋಷ್ ಅವರನ್ನು ಭೇಟಿಯಾಗಿ ಸದ್ಯದ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂಬುದು ಊಹಾಪೋಹ ಅಷ್ಟೇ. ನಾಯಕತ್ವ ಬದಲಾವಣೆ ವಿಚಾರವೇ ಚರ್ಚೆಗೆ ಬಂದಿಲ್ಲ ಎಂದರು.
ಬೆಳಗ್ಗೆ ಯಡಿಯೂರಪ್ಪರ ಮನೆಗೆ ಹೋಗಿ ಹಬ್ಬಕ್ಕೆ ಶುಭಕೋರಿದೆ. ಬಿ.ಎಲ್.ಸಂತೋಷ್‍ರನ್ನು ಭೇಟಿ ಮಾಡಿ ತುಂಬಾ ದಿನ ಆಗಿತ್ತು. ಹೀಗಾಗಿ ಇಂದು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದೆ ಎಂದು ಹೇಳಿದರು.