ದೇವರ ಸ್ವಂತ ನಾಡಿನ ಅತ್ಯದ್ಭುತ ಊರು ಆಲೆಪ್ಪಿ..! ಇಲ್ಲಿನ ಪ್ರಮುಖ ಆಕರ್ಷಣೆ ದೋಣಿಮನೆಗಳು..!
ಆಲೆಪ್ಪಿ.. ದೇವರ ಸ್ವಂತ ನಾಡಿನ ಅತ್ಯದ್ಭುತ ಊರು. ಪ್ರವಾಸಿಗರನ್ನು ಬಿಗಿದಪ್ಪಿಕೊಳ್ಳುವ ಆಲೆಪ್ಪಿ ಹಲವು ವಿಶೇಷತೆಗಳನ್ನು ಹೊಂದಿದೆ. ಇಲ್ಲಿನ ಕಡಲ ತೀರ, ಸರೋವರಗಳು, ದೋಣಿ ಮನೆ ಇವೆಲ್ಲವೂ ನಿಮಗೆ ಹೊಸ ಕಲ್ಪನೆಯನ್ನೇ ಗರಿಗೆದರಿಸುತ್ತವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತ ಹಿನ್ನೀರಿನಲ್ಲಿ ದೋಣಿ ವಿಹಾರ ಮಾಡುತ್ತ ಜಗತ್ತೇ ಮರೆಯಬಹುದಾದಷ್ಟು ಅನುಭೂತಿ ನಿಮ್ಮದಾಗುತ್ತದೆ.
ದೋಣಿಮನೆಗಳು ಪ್ರವಾಸಿಗರ ಹಾಟ್ ಫೇವ್ರೇಟ್..!
ಆಲೆಪ್ಪಿಯ ಬಹುದೊಡ್ಡ ಆಕರ್ಷಣೆ ಎಂದರೆ ಇಲ್ಲಿಯ ದೋಣಿಮನೆಗಳು. ದೋಣಿ ವಿಹಾರವನ್ನು ನಡೆಸುವುದಕ್ಕೆಂದೇ ಹಲವಾರು ಕ್ಲಬ್‌ಗಳು ಇಲ್ಲಿವೆ. ನೆಹರೂ ಟ್ರೋಫಿ ಹೆಸರಿನಲ್ಲಿ ಪ್ರತಿವರ್ಷವೂ ದೋಣಿವಿಹಾರ ಸ್ಫರ್ಧೆಯನ್ನೂ ನಡೆಸಿ, ರೋಲಿಂಗ್ ಟ್ರೋಫಿ ನೀಡಲಾಗುತ್ತದೆ. ಈ ವಿಶಿಷ್ಠ ಸ್ಪರ್ಧೆ ಕಳೆದ ಅರವತ್ತು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವುದು ವಿಶೇಷವಾಗಿದೆ.
ನಿಮಗಾಗಿ ಒಂದು ದೋಣಿ ಬುಕ್ ಮಾಡಿಕೊಂಡು ನಿಮ್ಮ ಸಂಗಾತಿಯೊಂದಿಗೆ ಪ್ರಕೃತಿಯ ಸೌಂದರ್ಯವನ್ನು ಆನಂದಿಸಿ. . ಆಗಾಗ್ಗೆ ಪೂರ್ವದ ವೆನಿಸ್ ಎಂದು ಕರೆಯಲ್ಪಡುವ ಆಲೆಪ್ಪಿ ಅಪಾರ ಅದ್ಭುತದ ಆಕರ್ಷಕ ಸ್ಥಳವಾಗಿದೆ. ೬೦೦ರಷ್ಟು ವಿವಿಧ ನಮೂನೆಯ ದೋಣಿಮನೆ ಇಲ್ಲಿವೆಯಂತೆ. ಅಕ್ಟೋಬರ-ಮೇ ಸೀಸನ್ನು. ಆಗ ಬೇಡಿಕೆ ಜಾಸ್ತಿ. ರೇಟೂ ಭಾರಿ. ವಿದೇಶೀಯರು, ವಿಐಪಿಗಳಿಗೇ ಹೆಚ್ಚಾಗಿ ಬಳಕೆ.
ಈ ದೋಣಿಮನೆ ನಿರ್ಮಿಸುವ, ದುರಸ್ತಿ ಮಾಡುವ ಕೈಗಾರಿಕೆಯೂ ಇಲ್ಲಿದೆ. ಸೀಸನ್ನಿನಲ್ಲಿ ಮೋಟರು ಲಾಂಚಿಗೆ ೧೦೦೦ ರು. ನೀಡಬೇಕಾಗುತ್ತದೆ. ದೋಣಿಮನೆಗೆ ೫ರಿಂದ ೧೦ ಸಾವಿರ ರೂ ದರವಿದೆ. ಇನ್ನು, ಸೂರ್ಯಾಸ್ತದ ಕೆಂಪು ಬಣ್ಣಗಳು ಸಮುದ್ರದ ಅಲೆಗಳೊಂದಿಗೆ ಸೇರಿ ನೋಡುವುದಕ್ಕೆ ರೋಮಂಚನ ಹುಟ್ಟಿಸುತ್ತವೆ. ಸ್ನೇಹಿತರು, ಕುಟುಂಬದವರೊಟ್ಟಿಗೆ ಬದುಕಿನ ಮಧುರ ಕ್ಷಣಗಳನ್ನು ಸಾರ್ಥಕಗೊಳಿಸಿಕೊಳ್ಳಲು ಅಲೆಪ್ಪಿ ಬೀಚ್ ಹೇಳಿ ಮಾಡಿಸಿದ ಕಡಲ ತಡಿ.
ಆಲೆಪ್ಪಿಯ ಆಧ್ಯಾತ್ಮಿಕತೆ..!
ಇದಲ್ಲದೇ ಆಲೆಪ್ಪಿ ಧಾರ್ಮಿಕ ಕೇಂದ್ರವೂ ಹೌದು. ಅಂಬಾಲಪುಳದ ಶ್ರೀಕೃಷ್ಣ ದೇವಸ್ಥಾನ, ಮುಲ್ಲಕ್ಕಲ್ಲಿನ ರಾಜೇಶ್ವರಿ ದೇವಸ್ಥಾನ, ಚೆಟ್ಟಿಕುಲಂಗರ ಭಗವತಿ ದೇವಾಲಯ, ಮನ್ನಾರಸಾಲಾದ ಶ್ರೀ ನಾಗರಾಜ ದೇವಾಲಯ, ಮತ್ತು ಎಡತುವಾ ಚರ್ಚ್, ಸೇಂಟ್ ಸೆಬಾಸ್ಟಿಯನ್ ಚರ್ಚ್, ಚಂಪಾಕುಲಮ್ ಚರ್ಚ್ ಮುಂತಾದವು ಇಲ್ಲಿಯ ಪ್ರಸಿಧ್ದ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳು. ಕ್ರಿಶ್ಚಿಯನ್ ಧರ್ಮ ಪ್ರಸಾರಕ್ಕಾಗಿ ದಕ್ಷಿಣ ಭಾರತಕ್ಕೆ ಬಂದಿದ್ದ ಸೇಂಟ್ ಥಾಮಸ್ ಇಲ್ಲಿ ಇಲ್ಲಿ ತಂಗಿದ್ದ ಎಂಬ ನಂಬಿಕೆಯೂ ಇಲ್ಲಿನ ಜನರಲ್ಲಿದೆ. ಬೌದ್ಧ ಧರ್ಮದ ಪ್ರೇರಣೆಗೂ ಈ ಪ್ರದೇಶ ಒಳಗಾಗಿದೆ. ಇಲ್ಲಿರುವ ಭೌಧ್ಧ ಸ್ಮಾರಕಗಳನ್ನು ಕೇರಳ ಸಂರಕ್ಷಿಸಿದೆ. ಪಾಂಡವನ್ ಗುಡ್ಡ ಹಾಗೂ ಕೃಷ್ಣಪುರಂ ಕ್ಷೇತ್ರಗಳು ಈ ಸಾಲಿನಲ್ಲಿ ಪ್ರಸಿದ್ಧವಾಗಿವೆ.
ಕೌರವರೊಂದಿಗೆ ಕಟ್ಟಿದ ಪಂಥದಲ್ಲಿ ಸೋತು, ಪಾಂಡವರು ವನವಾಸ ಅನುಭವಿಸುತ್ತಿದ್ದ ಕಾಲದಲ್ಲಿ ಇಲ್ಲಿ ಬಂದು ನೆಲೆಸಿದ್ದರೆನ್ನಲಾದ ಗುಹೆ ಇಲ್ಲಿಯ ವಿಶೇಷತೆ. ತಿರುವಾಂಕೂರಿನ ಅನಿಜಾ ತಿರುನಾಳ್ ಮಾರ್ತಾಂಡ ವರ್ಮ 18 ನೇ ಶತಮಾನದಲ್ಲಿ ಕೃಷ್ಣಪುರಂ ದೇವಸ್ಥಾನವನ್ನು ಕಟ್ಟಿದನೆಂಬ ಪ್ರತೀತಿ ಇದೆ. ಶಿಥಿಲಾವಸ್ಥೆ ತಲುಪಿದ್ದ ಮಾರ್ತಾಂಡ ವರ್ಮನ ಕೊಟೆಯನ್ನು ಕೇರಳದ ಪುರಾತತ್ವ ಇಲಾಖೆ ಪುನಶ್ಚೇತನಗೊಳಿಸಿದೆ. ಅಲ್ಲೆಪ್ಪಿಗೆ ಬರಲು ನವೆಂಬರ್‌ನಿಂದ ಪೆಭ್ರುವರಿಯವರೆಗೂ ಸಕಾಲ.ಇಲ್ಲಿಗೆ ಬರುವುದಕ್ಕೆ ರೈಲು, ವಿಮಾನ ಮತ್ತು ಬಸ್ ವ್ಯವಸ್ಥೆಯಿದೆ. ಕೊಚ್ಚಿ ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.