ಆನ್ ಲೈನ್ ಗೇಮ್ ನಲ್ಲಿ 40 ಸಾವಿರ ಕಳೆದುಕೊಂಡ ಬಾಲಕ ನೇಣಿಗೆ ಶರಣು..!
ಮಧ್ಯಪ್ರದೇಶ : 6 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆನ್ಲೈನ್ ಗೇಮ್ನಲ್ಲಿ 40 ಸಾವಿರ ಕಳೆದುಕೊಂಡಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.. ಈ ಘಟನೆ ಮಧ್ಯಪ್ರದೇಶದ ಛತ್ತಾರ್ಪುರ ನಗರದಲ್ಲಿ ನಡೆದಿದೆ.
ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ಓದುತ್ತಿರುವ 13 ವರ್ಷದ ಬಾಲಕ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಸಹ ಬರೆದಿಟ್ಟಿದ್ದಾನೆ.. ಅದ್ರಲ್ಲಿ ‘ಫ್ರೀ ಫೈರ್’ ಗೇಮ್ ಆಡುವುದಕ್ಕಾಗಿ 40 ಸಾವಿರ ಹಣ ವ್ಯರ್ಥ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ತಾಯಿಯ ಬಳಿ ಕ್ಷಮೆ ಕೇಳಿದ್ದಾನೆ. ತಂದೆ ಪ್ಯಾಥಾಲಜಿ ಲ್ಯಾಬ್ ನಡೆಸುತ್ತಿದ್ದಾರೆ. ತಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. ಈ ಬಾಲಕ ಗೇಮ್ ಆಡುವುದಕ್ಕಾಗಿ ತನ್ನ ತಾಯಿಯ ಖಾತೆಯಿಂದ 40 ಸಾವಿರ ರೂ. ಹಣ ಪಡೆದುಕೊಂಡಿದ್ದಾನೆ.
ಈ ಹಣ ಪಡೆದ ನಂತರ ತಾಯಿಯ ಮೊಬೈಲ್ ಗೆ ಸಂದೇಶ ಬಂದಿದೆ. ಹಣ ಪಡೆದಿರುವ ಬಗ್ಗೆ ತಾಯಿ ಮಗನನ್ನು ಗದರಿದ್ದಾರೆ. ಇದರಿಂದ ಬೇಸರಗೊಂಡು ಖಿನ್ನತೆ ಒಳಗಾದ ಬಾಲಕ ಯಾರೂ ಇಲ್ಲದ ಸಮಯದಲ್ಲಿ ಮನೆಯ ಕೋಣೆಯೊಂದರಲ್ಲಿ, ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಥದ್ದೇ ಘಟನೆಯೊಂದು ಈ ವರ್ಷದ ಜನವರಿಯಲ್ಲೂ ಮಧ್ಯಪ್ರದೇಶದಲ್ಲೇ ನಡೆದಿತ್ತು. ಸಾಗರ್ ಜಿಲ್ಲೆಯ ಧಾನಾ ಪಟ್ಟಣದಲ್ಲಿ ‘ಫ್ರೀ ಫೈರ್’ಗೇಮ್ ಆಡುವ ವಿಚಾರವಾಗಿಯೇ 12 ವರ್ಷದ ಬಾಲಕ ಜೀವ ಕಳೆದುಕೊಂಡಿದ್ದ. ಗೇಮ್ ಆಡುವುದಕ್ಕೆ ತಂದೆ ಅಡ್ಡಿಯುಂಟು ಮಾಡಿದರು ಎಂಬ ಕಾರಣಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದರು.