ಚೀನಾ ದುಡ್ಡಿನಲ್ಲಿ ಬಿಸಿಸಿಐ ಐಪಿಎಲ್ ನಡೆಸಬೇಕಾ ? ಶೇಮ್.. ಶೇಮ್.. ಎಲ್ಲಾ ಬರೀ ನಾಟಕ..!
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ದುಡ್ಡಿಗಾಗಿ ಏನು ಬೇಕಾದ್ರೂ ಮಾಡುತ್ತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಪಾಯವಿದ್ರೂ ದುಡ್ಡು ಕಳೆದುಕೊಳ್ಳಬಾರದು ಎಂದು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಅನುಮತಿ ಇನ್ನೂ ಸಿಗದಿದ್ರೂ ಹಠಕ್ಕೆ ಬಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಟೂರ್ನಿಯನ್ನು ಸಂಘಟಿಸಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ.
ಕ್ರಿಕೆಟ್ ವಿಚಾರದಲ್ಲಿ ಬಿಸಿಸಿಐ ಮಾಡಿದ್ದು ಸರಿ ಅಂತ ಹೇಳಬಹುದು. ದೇಶಿ ಕ್ರಿಕೆಟ್ ಅನ್ನು ಮತ್ತೆ ಪುನರಾರಂಭಿಸುವ ಬಗ್ಗೆಯೂ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ಮೂಲಕ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಿದೆ. ಇದು ಒಳ್ಳೆಯ ಬೆಳವಣಿಗೆ. ಅದೇ ರೀತಿ ಟೀಮ್ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರ ನಡೆಸುವ ಬಗ್ಗೆಯೂ ಪ್ಲಾನ್ ಮಾಡಿಕೊಂಡಿದೆ. ಇದನ್ನು ಒಪ್ಪಿಕೊಳ್ಳೋಣ. ಅದೇ ರೀತಿ ಐಪಿಎಲ್ ಟೂರ್ನಿಯನ್ನು ಸಂಘಟಿಸುತ್ತಿರುವ ಬಗ್ಗೆಯೂ ಖುಷಿ ಪಡೋಣ.
ಆದ್ರೆ ಆ ಒಂದು ನಿರ್ಧಾರ ಮಾತ್ರ ಸರಿಯಲ್ಲ. ಇದನ್ನು ಭಾರತೀಯರು ಒಪ್ಪಿಕೊಳ್ಳಲು ಸಾಧ್ಯನೇ ಇಲ್ಲ. ದೇಶ, ದೇಶದ ರಕ್ಷಣೆ, ದೇಶದ ಸೈನಿಕರ ಪ್ರಶ್ನೆ ಬಂದಾಗ ಪ್ರತಿಯೊಬ್ಬ ಭಾರತೀಯ ಜಾತಿ -ಧರ್ಮ ಬಿಟ್ಟು ಒಂದಾಗುತ್ತಾರೆ. ಆದ್ರೆ ಬಿಸಿಸಿಐ ಮಾಡಿದ್ದೇನು ? ದೇಶದ ಕ್ರಿಕೆಟಿಗರು ಸೈನಿಕರ ಬಗ್ಗೆ ಹೆಮ್ಮೆ ಪಡುವಂತಹ ಸಂದೇಶವನ್ನು ನೀಡುತ್ತಾರೆ. ಆದ್ರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಸೈನಿಕರ ಬಗ್ಗೆ ಬರೀ ಹೇಳಿಕೆ ಮಾತ್ರ ನೀಡುತ್ತಾರೆ. ಅವರ ಬಗ್ಗೆ ಗೌರವ ಏನು ಇಲ್ಲ ಎಂಬುದು ಬಿಸಿಸಿಐನ ಈ ನಿರ್ಧಾರದಿಂದ ತಿಳಿದು ಬರುತ್ತೆ.
ಹೌದು, ಬಿಸಿಸಿಐ ಐಪಿಎಲ್ ಪ್ರಾಯೋಜಕತ್ವದ ವಿಚಾರದಲ್ಲಿ ಇಡೀ ಭಾರತೀಯರಿಗೆ ಅವಮಾನ ಮಾಡಿದೆ. ಐಪಿಎಲ್‍ಗೆ ಮುಖ್ಯ ಪ್ರಾಯೋಜಕತರ್ವ ವಹಿಸಿದ್ದು ಚೀನಾ ಮೂಲದ ವಿವೋ ಕಂಪೆನಿ. ಬಿಸಿಸಿಐ ಐದು ವರ್ಷಗಳ ಕಾಲ ವಿವೋ ಕಂಪೆನಿಯ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ನಡುವೆ ಗಲ್ವಾನ್ ನಲ್ಲಿ ಚೀನಾ ಸೈನಿಕರು ದಾಳಿ ನಡೆಸಿದ್ದ ಪರಿಣಾಮ ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಆ ನಂತರ ಭಾರತದಲ್ಲಿ ಚೀನಾದ ವಸ್ತುಗಳನ್ನು ನಿಷೇಧಿಸಲಾಗಿತ್ತು. ಸುಮಾರು 50ಕ್ಕೂ ಹೆಚ್ಚು ಆಪ್‍ಗಳನ್ನು ಬ್ಯಾನ್ ಮಾಡಲಾಗಿತ್ತು.
ಆದ್ರೆ ಭಾನುವಾರ ನಡೆದ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ವಿವೋ ಕಂಪೆನಿಯ ಜೊತೆಗಿನ ಪ್ರಾಯೋಜಕತ್ವವನ್ನು ಮುಂದುವರಿಸಲು ಸಹಮತ ಸೂಚಿಸಲಾಗಿದೆ. ಬಿಸಿಸಿಐನ ಈ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳಿಗೆ ತುಸು ಬೇಸರವನ್ನುಂಟು ಮಾಡಿದೆ. ಅಲ್ಲದೆ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕವಾಗಿ ಟೀಕೆ ಕೂಡ ಕೇಳಿಬರುತ್ತಿದೆ.
ಈ ಹಿಂದೆ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಲ್ಲದೆ ಚೀನಾ ಮೂಲದ ವಿವೋ ಕಂಪೆನಿಯ ಪ್ರಾಯೋಜಕತ್ವವನ್ನು ರದ್ದುಗೊಳಿಸಿ ಭಾರತೀಯ ಕಂಪೆನಿಗಳಿಗೆ ಪ್ರಾಯೋಜಕತ್ವ ನೀಡಲು ಬಿಸಿಸಿಐ ಮುಂದಾಗಬೇಕು ಎಂಬ ಸಲಹೆಯನ್ನು ನೀಡಿದ್ದರು.
ಒಟ್ಟಿನಲ್ಲಿ ಬಿಸಿಸಿಐಗೆ ದುಡ್ಡೇ ದೊಡ್ಡಪ್ಪ ಎಂಬಂತಾಗಿದೆ. ದೇಶದ ಹಿತಕ್ಕಿಂತ ದುಡ್ಡೇ ಮುಖ್ಯವಾಗಿದೆ. ಈಗಾಗಲೇ ಚೀನಾ ವೈರಸ್ ಕೊರೋನಾದಿಂದಾಗಿ ಭಾರತದ ಆರ್ಥಿಕ ಪರಿಸ್ಥಿತಿ ಅಲ್ಲೋಕಲ್ಲೋಲವಾಗಿಬಿಟ್ಟಿದೆ. ಇದ್ರ ನಡುವೆ ಬಿಸಿಸಿಐ ಚೀನಾ ಮೂಲದ ಕಂಪೆನಿಗಳಿಗೆ ಐಪಿಎಲ್ ಮೂಲಕ ಪ್ರಚಾರವನ್ನು ನೀಡುತ್ತಿದೆ. 45 ದಿನಗಳ ಹಿಂದೆ ನಡೆದಿದ್ದ ಘಟನೆಯನ್ನು ಬಿಸಿಸಿಐ ಇಷ್ಟು ಬೇಗ ಮರೆತುಬಿಟ್ಟಿತ್ತಾ ಅನ್ನೋ ಪ್ರಶ್ನೆಗಳು ಎದುರಾಗುತ್ತಿವೆ. ಒಟ್ಟಾರೆ, ಹಣದ ಮುಂದೆ ಯಾವುದು ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಇನ್ನೊಂದೆಡೆ ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನವೇ ಶುರುವಾಗಿದೆ. ಐಪಿಎಲ್ ಟೂರ್ನಿಯನ್ನು ರದ್ದುಗೊಳಿಸಿ.. ದೇಶಕ್ಕಿಂತ ಮುಖ್ಯ ಯಾವುದೇ ಕ್ರೀಡೆ ಇಲ್ಲ ಎಂಬ ಅಭಿಯಾನ ಪ್ರಾರಂಭವಾಗಿದೆ. ಆದ್ರೆ ಬಿಸಿಸಿಐ ಇದನ್ನೆಲ್ಲಾ ಅರ್ಥಮಾಡಿಕೊಳ್ಳುವಷ್ಟು ಪುರುಸೊತ್ತು ಇಲ್ಲ. ಅದೇ ರೀತಿ ಕ್ರಿಕೆಟ್ ಅಭಿಮಾನಿಗಳು ಅಷ್ಟೇ.. ಒಂದಷ್ಟು ದಿನ ಈ ಬಗ್ಗೆ ಅಪಸ್ವರ ಎತ್ತುತ್ತಾರೆ. ಆ ನಂತರ ಐಪಿಎಲ್ ಪಂದ್ಯವನ್ನು ನೋಡಿಕೊಂಡು ಎಲ್ಲವನ್ನು ಮರೆತುಬಿಡುತ್ತಾರೆ. ಇದು ಬಿಸಿಸಿಐಗೂ ಚೆನ್ನಾಗಿ ಗೊತ್ತು. ಬೊಬ್ಬೆ ಹೊಡೆಯುವವರು ಬೊಬ್ಬೆ ಹೊಡೆಯುತ್ತನೇ ಇರುತ್ತಾರೆ.. ದುಡ್ಡು ಮಾಡೋರು ದುಡ್ಡು ಮಾಡ್ತಾನೆ ಇರುತ್ತಾರೆ… ಇದು ನಮ್ಮ ಭಾರತ..!