ಕೊಪ್ಪಳ: ಇಂದು ರಾಜ್ಯದಲ್ಲಿ ಎರಡನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಕೆಲವೆಡೆ ಮತದಾರರು ಮತದಾನ ಬಹಿಷ್ಕರಿಸಿದ್ದಾರೆ.
ಜಿಲ್ಲೆಯ ಮೂರು ಪ್ರದೇಶಗಳಲ್ಲಿ ಮತದಾರರು ಮತದಾನ ಬಹಿಷ್ಕರಿಸಿದ್ದಾರೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರಿಸಿದ್ದಾರೆ. ಇತ್ತೀಚೆಗಷ್ಟೇ ಲಕ್ಷ್ಮಿ ಎಂಬ ಮಹಿಳೆ ಹೆರಿಗೆ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಆದರೆ ಒಂದು ವಾರ ಕಳೆದರೂ ತಪ್ಪಿತಸ್ಥ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಡಾವಣೆಯ ಜನರು ಮತದಾನ ಬಹಿಷ್ಕರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೆ ಮತದಾನ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮಸ್ಥರು ವಾಸಿಸುವ ಮನೆಗಳಿಗೆ ಹಕ್ಕು ಪತ್ರ ನೀಡದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಿದ್ದಾರೆ. ಕುಕನೂರು ಪಟ್ಟಣದ 19ನೇ ವಾರ್ಡ್ನ ಗುದ್ನೇಪ್ಪನ ಮಠದ ನಿವಾಸಿಗಳು, ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕೆಂದು ಮತದಾನ ಬಹಿಷ್ಕರಿಸಿದ್ದಾರೆ.